ದುಬೈನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 50 ಓವರ್‌ಗಳಲ್ಲಿ 249 ರನ್ ಗಳಿಸಿತು. ಮ್ಯಾಟ್ ಹೆನ್ರಿ ಅವರ ಮಾರಕ ದಾಳಿಯಿಂದ ಭಾರತದ ಅಗ್ರ ಕ್ರಮಾಂಕ ಕುಸಿಯಿತು. ಶ್ರೇಯಸ್ ಅಯ್ಯರ್ (79) ಮತ್ತು ಅಕ್ಷರ್ ಪಟೇಲ್ (42) ಉತ್ತಮ ಜೊತೆಯಾಟವಾಡಿದರು. ಹೆನ್ರಿ 5 ವಿಕೆಟ್ ಪಡೆದು ಮಿಂಚಿದರು. ಕಿವೀಸ್ ಬೌಲಿಂಗ್ ನಿರ್ವಹಣೆ ಉತ್ತಮವಾಗಿತ್ತು.
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಮ್ಯಾಟ್ ಹೆನ್ರಿ ಮಾರಕ ದಾಳಿಗೆ ಟೀಂ ಇಂಡಿಯಾ ತತ್ತರಿಸಿ ಹೋಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಬಾರಿಸಿದ್ದು, ಕಿವೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದೆ. ಮ್ಯಾಟ್ ಹೆನ್ರಿ 5 ವಿಕೆಟ್ ಕಬಳಿಸಿ ಮಿಂಚಿದರು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಿಂದಲೇ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಕಿವೀಸ್ ಬೌಲರ್‌ಗಳು ಯಶಸ್ವಿಯಾದರು. ಶುಭ್‌ಮನ್ ಗಿಲ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿ ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು 300ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲಿಳಿದ ವಿರಾಟ್ ಕೊಹ್ಲಿ ಕೇವಲ 11 ರನ್ ಗಳಿಸಿ ಗ್ಲೆನ್ ಫಿಲಿಫ್ಸ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು. ಭಾರತ 30 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.
ಇದಾದ ಬಳಿಕ 4ನೇ ವಿಕೆಟ್‌ಗೆ ಜತೆಯಾದ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಸಮಯೋಚಿತ 98 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ ಆ ಬಳಿಕ ನಿಧಾನವಾಗಿ ರನ್ ಗಳಿಸುತ್ತಾ ಸಾಗಿತು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್61 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್ ಬಾರಿಸಿ ರಚಿನ್ ರವೀಂದ್ರಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 98 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 79 ರನ್ ಗಳಿಸಿ ವಿಲಿಯಂ ಓ'ರೂರ್ಕೆಗೆ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್ 23 ರನ್ ಗಳಿಸಿದರೆ, ರವೀಂದ್ರ ಜಡೇಜಾ ಬ್ಯಾಟಿಂಗ್ 16 ರನ್‌ಗಳಿಗೆ ಸೀಮಿತವಾಯಿತು. ಇನ್ನು ಕೊನೆಯಲ್ಲಿ ಚುರುಕಾಗಿ ರನ್ ಗಳಿಸಿದ ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಮ್ಯಾಟ್ ಹೆನ್ರಿಗೆ 5 ವಿಕೆಟ್" ಆರಂಭದಿಂದಲೇ ಆಕ್ರಮಣಕಾರಿ ದಾಳಿ ನಡೆಸಿದ ಮ್ಯಾಟ್ ಹೆನ್ರಿ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 8 ಓವರ್ ಬೌಲಿಂಗ್ ಮಾಡಿದ ಮ್ಯಾಟ್ ಹೆನ್ರಿ ಕೇವಲ 42 ರನ್ ನೀಡಿ 5 ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಟೀಂ ಇಂಡಿಯಾವನ್ನು 250 ರನ್‌ಗಳೊಳಗಾಗಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
