ಅಹಮದಾಬಾದ್‌(ಮಾ.16): ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಲಯಕ್ಕೆ ಮರಳಲು ಎಬಿ ಡಿ ವಿಲಿಯರ್ಸ್ ಕಾರಣವಂತೆ. ಹೀಗಂತ ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದಾರೆ. 

ಹಲವು ದಿನಗಳಿಂದ ಬ್ಯಾಟಿಂಗ್‌ ಲಯದ ಸಮಸ್ಯೆ ಎದುರಿಸುತ್ತಿದ್ದ ವಿರಾಟ್‌, ಇಂಗ್ಲೆಂಡ್‌ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಅಜೇಯ 73 ರನ್‌ ಗಳಿಸಿ ಲಯಕ್ಕೆ ಮರಳಿದರು. ಪಂದ್ಯ ಮುಕ್ತಾಯಗೊಂಡ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಮಾತನಾಡಿದ ಅವರು, ‘ತಂಡದ ಆಡಳಿತ ನನ್ನ ಬಳಿ ಚರ್ಚೆ ನಡೆಸಿತು. ಪಂದ್ಯಕ್ಕೂ ಮುನ್ನ ಎಬಿಡಿ ಜೊತೆ ಬಹಳ ಹೊತ್ತು ಮಾತುಕತೆ ನಡೆಸಿದೆ. ಆ ವೇಳೆ ಚೆಂಡಿನ ಮೇಲೆ ಕಣ್ಣಿಡುವಂತೆ ಹೇಳಿದರು. ಅವರು ಹೇಳಿದಂತೆ ಮಾಡಿದೆ ಅಷ್ಟೆ’ ಎಂದರು. 

ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ!

ಕೊಹ್ಲಿ ಹಾಗೂ ಎಬಿಡಿ ನಡುವಿನ ಸ್ನೇಹದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಚರ್ಚಿಸುತ್ತಿದ್ದು, ಇಬ್ಬರು ಒಟ್ಟಿಗೆ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡುವುದನ್ನು ನೋಡಲು ಕಾತರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ 6 ವಿಕೆಟ್‌ ಕಳೆದುಕೊಂಡು 164 ರನ್‌ಗಳ ಸ್ಫರ್ಧಾತ್ಮಕ ಗುರಿ ನೀಡಿತ್ತು.  ಈ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಘಾತದ ಹೊರತಾಗಿಯೂ ಇಶನ್ ಕಿಶನ್ ಸ್ಫೋಟಕ ಅರ್ಧಶತಕ ಹಾಗೂ ನಾಯಕ ವಿರಾಟ್ ಕೊಹ್ಲಿಯ ಅಜೇಯ 73 ರನ್‌ಗಳ ನೆರವಿನಿಂದ ಸುಲಭ ಗೆಲುವು ದಾಖಲಿಸಿತ್ತು.