ನವದೆಹಲಿ(ಡಿ.15): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟ ಭಾರತೀಯ ಕ್ರೀಡಾಪಟುಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ, ಭಾರತ ಕ್ರಿಕೆಟ್ ತಂಡದ ಸಹ ಆಟಗಾರ ರೋಹಿತ್ ಶರ್ಮಾ ಹಾಗೂ ಮಾಜಿ ಆಟಗಾರ ಎಂ.ಎಸ್. ಧೋನಿಯನ್ನು ಹಿಂದಿಕ್ಕಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾದವರ ಪಟ್ಟಿಯಲ್ಲಿ ಧೋನಿ 2ನೇ ಸ್ಥಾನ ಪಡೆದಿದ್ದರೆ, ಹಿಟ್ ಮ್ಯಾನ್ ರೋಹಿತ್ ಶರ್ಮಾ 3ನೇ ಸ್ಥಾನ ಹೊಂದಿದ್ದಾರೆ. ತಾರಾ ಮಹಿಳಾ ಕುಸ್ತಿಪಟು ಗೀತಾ ಫೋಗಾಟ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಮಹಿಳಾ ವಿಭಾಗದಲ್ಲಿ ಅಗ್ರ 3 ಸ್ಥಾನದಲ್ಲಿದ್ದಾರೆ. 

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ, ಡಿ.17ರಂದು ಅಡಿಲೇಡ್ ನಲ್ಲಿ ಆರಂಭವಾಗಲಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಬಳಿಕ ಪಿತೃತ್ವ ರಜೆ ಮೇಲೆ ಭಾರತಕ್ಕೆ ಮರಳಲಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಫೋಟೋ ವೈರಲ್ ಆಗಿತ್ತು ಈ ಹಿನ್ನೆಲೆಯಲ್ಲಿ ಕೊಹ್ಲಿ ಟ್ವೀಟರ್‌ನಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ ಎನ್ನಲಾಗುತ್ತಿದೆ. 

ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಚ್ಚರವೆಂದ ಆ್ಯರೋನ್ ಫಿಂಚ್

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಕ್ರಿಕೆಟ್‌ನಿಂದ ದೀರ್ಘಕಾಲ ದೂರ ಉಳಿದ ಬಳಿಕ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮತ್ತೊಂದೆಡೆ ಧೋನಿಯ ನಿವೃತ್ತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರಕ್ಕೆ ಧೋನಿಯ ಪ್ರತಿಕ್ರಿಯೆ ಅತ್ಯಂತ ಹೆಚ್ಚು ಬಾರಿ ರೀಟ್ವೀಟ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ.