Asianet Suvarna News Asianet Suvarna News

MS Dhoni ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌..!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಫ್ರಾಂಚೈಸಿಯಿಂದ ಗುಡ್‌ ನ್ಯೂಸ್
ಮುಂಬರುವ ಐಪಿಎಲ್‌ನಲ್ಲೂ ಚೆನ್ನೈ ತಂಡಕ್ಕೆ ಧೋನಿಯೇ ನಾಯಕ
ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ

Captain Cool MS Dhoni to continue to lead Chennai Super Kings in IPL 2023 kvn
Author
First Published Sep 4, 2022, 5:20 PM IST

ಚೆನ್ನೈ(ಸೆ.04): ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಎರಡು ವರ್ಷಗಳು ಕಳೆದಿವೆ. ಹೀಗಿದ್ದೂ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಮಹೇಂದ್ರ ಧೋನಿ ಕುರಿತಂತೆ ಅವರ ಅಭಿಮಾನಿಗಳಿಗೆ ಸಿಎಸ್‌ಕೆ ಫ್ರಾಂಚೈಸಿ ಸಿಹಿ ಸುದ್ದಿಯೊಂದನ್ನು ನೀಡಿದೆ.

ಹೌದು, ಮುಂಬರುವ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಮೂಲಗಳು ಖಚಿತಪಡಿಸಿವೆ. ಹೀಗಾಗಿ 40 ವರ್ಷದ ಧೋನಿ ಮತ್ತೊಮ್ಮೆ ನಾಯಕರಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕಾಶಿ ವಿಶ್ವನಾಥನ್‌, ಮುಂದಿನ ವರ್ಷದ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಇದೇ ಕೊನೆಯ ಬಾರಿಗೆ ಕೂಡಾ ಆಗಬಹುದು ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಕೆಲವೇ ದಿನಗಳ ಮುಂಚೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾಗೆ ನಾಯಕ ಪಟ್ಟ ಕಟ್ಟಿತ್ತು. ಆದರೆ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನೀರಸ ಪ್ರದರ್ಶನ ತೋರಿತ್ತು. ಹೀಗಾಗಿ ಟೂರ್ನಿಯ ಮಧ್ಯ ಭಾಗದಲ್ಲೇ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಗೆ ನಾಯಕ ಪಟ್ಟ ಕಟ್ಟಿತ್ತು. ಅಷ್ಟರಲ್ಲಾಗಲೇ ಪರಿಸ್ಥಿತಿ ಕೈಮೀರಿದ್ದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಇನ್ನು 2022ರ ಐಪಿಎಲ್ ಟೂರ್ನಿ ಬಳಿಕ ಧೋನಿ ಐಪಿಎಲ್‌ಗೂ ವಿದಾಯ ಘೋಷಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದ ಟಾಸ್ ವೇಳೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಧೋನಿ, ತಾವು ಮುಂದಿನ ಆವೃತ್ತಿಯಲ್ಲೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದರು. ಚೆನ್ನೈನಲ್ಲಿ ಕೊನೆಯ ಪಂದ್ಯವನ್ನಾಡದೇ, ಧನ್ಯವಾದ ಹೇಳದೇ ವಿದಾಯ ಘೋಷಿಸಿದರೇ ಸರಿಯಾಗುವುದಿಲ್ಲ. ಹೀಗಾಗಿ ಖಂಡಿತವಾಗಿಯೂ ಮುಂದಿನ ವರ್ಷ ತಾವು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಾಗಿ ಧೋನಿ ಸ್ಪಷ್ಟಪಡಿಸಿದ್ದರು.

ಅದು 'S' ನಿಂದ ಆರಂಭವಾಗುವ ನಾಲ್ಕಕ್ಷರದ ಪದ, ನಾನಿಲ್ಲಿ ಹೇಳಲು ಸಾಧ್ಯವಿಲ್ಲ: ದ್ರಾವಿಡ್‌ ಹೀಗಂದಿದ್ದೇಕೆ..?

ಮಹೇಂದ್ರ ಸಿಂಗ್ ಧೋನಿ 2008ರಿಂದ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 12 ಆವೃತ್ತಿಗಳಲ್ಲಿ ಪಾಲ್ಗೊಂಡು 10 ಬಾರಿ ಪ್ಲೇ ಆಫ್‌ ಪ್ರವೇಶಿಸಿದ ಸಾಧನೆ ಮಾಡಿದೆ. ಇದಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಧೋನಿ ನಾಯಕತ್ವದಡಿ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಮೂರು ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದರ ಜತೆಗೆ 2010 ಹಾಗೂ 2014ರಲ್ಲಿ ಚಾಂಪಿಯನ್ಸ್‌ ಲೀಗ್ ಜಯಿಸುವಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಯಶಸ್ವಿಯಾಗಿದೆ. ಮುಂದಿನ ಐಪಿಎಲ್‌ ಟೂರ್ನಿ ಆಡುವ ವೇಳೆಗೆ ಧೋನಿ ವಯಸ್ಸು 42ರ ಸಮೀಪ ಆಗಲಿದ್ದು, ಬಹುತೇಕ 15ನೇ ಆವೃತ್ತಿಯ ಐಪಿಎಲ್‌ ಬಳಿಕ ಕ್ರಿಕೆಟ್‌ಗೆ ಆಟಗಾರನಾಗಿ ವಿದಾಯ ಘೋಷಿಸುವ ಸಾಧ್ಯತೆಯಿದೆ.

Follow Us:
Download App:
  • android
  • ios