* ಏಷ್ಯಾಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತ ಪಾಕ್ ಪೈಪೋಟಿಗೆ ಕ್ಷಣಗಣನೆ* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯ* ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ರಾಹುಲ್ ದ್ರಾವಿಡ್
ದುಬೈ(ಸೆ.04): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದೀಗ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಆಟಗಾರರು ಕೊಂಚ ರಿಲ್ಯಾಕ್ಸ್ ಆಗಿದ್ದಂತೆ ಕಂಡು ಬರುತ್ತಿದ್ದಾರೆ. ರಾಹುಲ್ ದ್ರಾವಿಡ್ ಕೊಂಚ ಗಂಭೀರ ವ್ಯೆಕ್ತಿತ್ವ ಹೊಂದಿರುವವರಾಗಿದ್ದರೂ ಸಹಾ, ಕೆಲವೊಮ್ಮೆ ಚುಟುಕು ಹಾಸ್ಯದ ಮಾತನಾಡುವ ಮೂಲಕ ತಮ್ಮ ಸುತ್ತಮುತ್ತಲಿರುವವರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡುತ್ತಾರೆ. ಅದೇ ರೀತಿ ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 4 ಹಂತದ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮತ್ತೊಮ್ಮೆ ಸುತ್ತಮುತ್ತಲಿರುವ ವ್ಯಕ್ತಿಗಳು ನಗೆಗಡಲಲ್ಲಿ ತೇಲಿಸಿದ್ದಾರೆ. ಇದೇ ವೇಳೆ ತಾವೊಬ್ಬ ಜೆಂಟಲ್‌ಮ್ಯಾನ್ ಎನ್ನುವುದನ್ನು ರಾಹುಲ್ ದ್ರಾವಿಡ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್‌ಗಳು ಹಾಂಕಾಂಗ್ ತಂಡವನ್ನು ಕೇವಲ 38 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಅಂತರದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಾಕಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಯಿತು. ಮತ್ತೊಂದೆಡೆ ಇದಕ್ಕೂ ಮೊದಲು ಟೀಂ ಇಂಡಿಯಾ ಬೌಲರ್‌ಗಳು ಹಾಂಕಾಂಗ್ ತಂಡದ 5 ವಿಕೆಟ್ ಕಬಳಿಸಿ 152 ರನ್ ಬಿಟ್ಟುಕೊಟ್ಟಿದ್ದರು.
ಹೀಗಾಗಿ ವರದಿಗಾರರು, ದುಬೈನಲ್ಲಿ ನಡೆಯಲಿರುವ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡದ ಬೌಲರ್‌ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ದ್ರಾವಿಡ್, ಅವರ ಬೌಲಿಂಗ್ ಪಡೆ ಚೆನ್ನಾಗಿದೆ. ಇಲ್ಲಿಯವರೆಗೂ ಪಾಕಿಸ್ತಾನದ ಬೌಲರ್‌ಗಳು ಉತ್ತಮ ದಾಳಿ ನಡೆಸಿದ್ದಾರೆ. ಆದರೆ ನಮ್ಮ ಬೌಲರ್‌ಗಳು ಅವರನ್ನು ಕೇವಲ 147 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ. ನೀವು ಎದುರಾಳಿ ತಂಡವನ್ನು ಎಷ್ಟು ರನ್‌ಗಳಿಗೆ ನಿಯಂತ್ರಿಸುತ್ತೀರ ಎನ್ನುವುದು ಮುಖ್ಯವಾಗುವುದಿಲ್ಲ. ರನ್‌ಗಳು ಕೊಂಚ ವ್ಯತ್ಯಾಸವಾಗಬಹುದು, ಆದರೆ ದಿನದಂತ್ಯದ ವೇಳೆಗೆ ತಂಡದ ಬೌಲಿಂಗ್ ಪ್ರದರ್ಶನ ಹೇಗಿತ್ತು ಎನ್ನುವ ವಿಶ್ಲೇಷಣೆ ಮುಖ್ಯವಾಗುತ್ತದೆ. ನಿಮ್ಮ ಪ್ರದರ್ಶನದ ಮೇಲೆ ತಂಡದ ಫಲಿತಾಂಶ ನಿರ್ಧಾರವಾಗುತ್ತದೆ. ನಮ್ಮ ತಂಡದ ವೇಗದ ಬೌಲರ್‌ಗಳ ಪ್ರದರ್ಶನ ತುಂಬಾ ಉತ್ತಮವಾಗಿದೆ. ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ನಾನು ಗೌರವಿಸುತ್ತೇನೆ. ಆದರೆ ನಮ್ಮ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ನನಗೆ ಆತ್ಮವಿಶ್ವಾಸವಿದ್ದು, ಮತ್ತೊಮ್ಮೆ ನಮ್ಮ ತಂಡದಿಂದ ಒಳ್ಳೆಯ ಫಲಿತಾಂಶ ಹೊರಹೊಮ್ಮುವ ವಿಶ್ವಾಸವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಅನುಷ್ಕಾ ಶರ್ಮಾ ಫೋಟೋಗೆ ಕಾಮೆಂಟ್ ಮಾಡಿದ ಡೇವಿಡ್ ವಾರ್ನರ್ ಟ್ರೋಲ್..! ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವೈರಲ್
ಇನ್ನು ಪಾಕಿಸ್ತಾನ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ಹೇಳುವ ಭರದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಯೂನಿಟ್ ಹೇಗಿದೆ ಎಂದರೇ, ನಾನು ಇಲ್ಲಿ ಆ ಪದವನ್ನು ಬಳಸದೇ ಇರುವುದೇ ಒಳ್ಳೆಯದ್ದು. ಏನು ಹೇಳಬೇಕು ಎನ್ನುವುದು ನನ್ನ ಮನಸ್ಸಿನಲ್ಲಿದೆ ಆದರೆ ನಾನದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ರಾಹುಲ್ ದ್ರಾವಿಡ್ ಹೀಗನ್ನುತ್ತಿದ್ದಂತೆಯೇ ಮಾಧ್ಯಮದವರು ಜೋರಾಗಿ ನಗೆಗಡಲಿನಲ್ಲಿ ತೇಲಿದ್ದಾರೆ. ಸಾಕಷ್ಟು ಸಿಂಪ್ಲಿಸಿಟಿಗೆ ಹೆಸರಾಗಿರುವ ರಾಹುಲ್ ದ್ರಾವಿಡ್, ಹಾಸ್ಯಪ್ರಜ್ಞೆಯ ಜತೆಗೆ ಸಭ್ಯತೆಯ ಎಲ್ಲೆಯನ್ನು ಮೀರದೇ ಹೋದದ್ದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಪತ್ರಕರ್ತರೊಬ್ಬರು, ಅದಕ್ಕೆ ಪರ್ಯಾಯವಾದ ಪದವನ್ನಾದರೂ ಬಳಸಬಹುದೇ ಎನ್ನುವ ಮೂಲಕ ದ್ರಾವಿಡ್ ಅವರನ್ನು ಬಾಯಿ ಬಿಡಿಸಲು ಯತ್ನಿಸಿದ್ದಾರೆ. ಇದಕ್ಕೆ ದ್ರಾವಿಡ್ ತಕ್ಷಣ ಪ್ರತಿಕ್ರಿಯಿಸಿದ್ದು, ಅದು 'S' ನಿಂದ ಆರಂಭವಾಗುವ ನಾಲ್ಕಕ್ಷರದ ಪದವೆಂದು ಚುಟುಕಾಗಿ ಉತ್ತರಿಸಿದ್ದಾರೆ. ಪಾಕಿಸ್ತಾನದ ಬೌಲಿಂಗ್ ಪಡೆ 'Sexy'ಯಾಗಿದೆ ಎನ್ನುವುದಕ್ಕೆ ದ್ರಾವಿಡ್ ಈ ರೀತಿ ಪರೋಕ್ಷವಾಗಿ ಹೇಳಿದ್ದಾರೆ.
