ಅಹಮದಾಬಾದ್(ಮಾ.18): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಈಗಾಗಲೇ 1-2ರ ಹಿನ್ನಡೆಯಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಕಳೆದೆರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಶುಭ ಸೂಚನೆಯಾದರೂ, ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ದಯಾನೀಯ ಬ್ಯಾಟಿಂಗ್‌ ವೈಫಲ್ಯ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇನ್ನು ಟಾಸ್ ಕೂಡಾ ಇಂದಿನ ಪಂದ್ಯದ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. 

* ಪವರ್‌ ಪ್ಲೇನಲ್ಲಿ ರನ್‌ ಬಾರಿಸಬೇಕಿದೆ ಟೀಂ ಇಂಡಿಯಾ ಅಗ್ರ ಕ್ರಮಾಂಕ: ಮೊದಲ ಟಿ20 ಪವರ್‌ ಪ್ಲೇನಲ್ಲಿ ಟೀಂ ಇಂಡಿಯಾ 3 ವಿಕೆಟ್‌ ಕಳೆದುಕೊಂಡು ಕೇವಲ 22 ರನ್‌ ಬಾರಿಸಿತ್ತು. ಹೀಗಾಗಿ ಭಾರತ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರ ತಲೆಕೆಳಗಾಗಿತ್ತು. ಅದೇ ರೀತಿ 3ನೇ ಟಿ20 ಪಂದ್ಯದಲ್ಲೂ ಸಹಾ ಪವರ್‌ ಪ್ಲೇನಲ್ಲಿ ಟೀಂ ಇಂಡಿಯಾ 24 ರನ್‌ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಹೀಗಾಗಿ ಟೀಂ ಇಂಡಿಯಾ ದೊಡ್ಡ ಮೊತ್ತ ಕಲೆಹಾಕಬೇಕಿದ್ದರೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪವರ್‌ ಪ್ಲೇನಲ್ಲಿ ಅಬ್ಬರಿಸಲೇಬೇಕಿದೆ.

ಟೀಂ ಇಂಡಿಯಾ ಸಿಡಿದರಷ್ಟೇ ಟಿ20 ಸರಣಿ ಆಸೆ ಜೀವಂತ..!

* ಲಯ ಕಂಡುಕೊಳ್ಳಬೇಕಿದೆ ಬೌಲರ್‌ಗಳು: ಹೌದು, ಎರಡನೇ ಟಿ20 ಪಂದ್ಯದಲ್ಲಿ ಸಂಘಟನಾತ್ಮಕ ಬೌಲಿಂಗ್‌ ದಾಳಿ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೌಲರ್‌ಗಳು ಮತ್ತೆ 3ನೇ ಟಿ20 ಪಂದ್ಯದಲ್ಲಿ ತಮ್ಮ ಮೊನಚು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು. ಅದರಲ್ಲೂ ತಂಡದ ಸ್ಪಿನ್ ಅಸ್ತ್ರವೆಂದೇ ಗುರುತಿಸಿಕೊಂಡಿರುವ ಯುಜುವೇಂದ್ರ ಚಹಲ್‌ ಕಳೆದ ಮೂರು ಪಂದ್ಯಗಳಲ್ಲೂ ಸಾಕಷ್ಟು ದುಬಾರಿಯಾಗಿದ್ದಾರೆ.  ಚಹಲ್‌ ಬದಲಿಗೆ ಅಕ್ಷರ್ ಪಟೇಲ್‌ ಹಾಗೆಯೇ ಶಾರ್ದೂಲ್ ಠಾಕೂರ್ ಬದಲಿಗೆ ನವದೀಪ್‌ ಸೈನಿ ಆಡುವ ಹನ್ನೊಂದರ ಬಳಗ ಕೂಡಿಕೊಂಡರೂ ಅಚ್ಚರಿ ಪಡಬೇಕಿಲ್ಲ.

* ಅಬ್ಬರಿಸಬೇಕಿದೆ ಪಾಂಡ್ಯ-ಪಂತ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಎನಿಸಿಕೊಂಡಿರುವ ರಿಷಭ್‌ ಪಂತ್ ಹಾಗೂ ಹಾರ್ದಿಕ್‌ ಪಾಂಡ್ಯ ಬ್ಯಾಟಿಂದ ವಿಸ್ಪೋಟಕ ಬ್ಯಾಟಿಂಗ್ ಮೂಡಿಬರುತ್ತಿಲ್ಲ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಸ್ಟ್ರೈಕ್‌ರೇಟ್ ಕೇವಲ ನೂರರ ಆಸುಪಾಸಿನಲ್ಲೇ ಇದೆ. ಹೀಗಾಗಿ ಈ ಇಬ್ಬರು ಕೊನೆಯ ಕೆಲ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಬೇಕಿದೆ.

ಒಟ್ಟಿನಲ್ಲಿ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 4ನೇ ಟಿ20 ಪಂದ್ಯದಲ್ಲಿ ವಿರಾಟ್ ಪಡೆ ಮೈದಾನಕ್ಕಿಳಿಯಬೇಕಾಗಿದೆ. ಒಟ್ಟಿನಲ್ಲಿ 4ನೇ ಪಂದ್ಯ ಕೂಡಾ ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ. ಹೇಳಿಕೇಳಿ ಫೀನಿಕ್ಸ್‌ನಂತೆ ಎದ್ದುಬರುವ ಛಾತಿ ಹೊಂದಿರುವ ಟೀಂ ಇಂಡಿಯಾ 4ನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ಗೆ ತಿರುಗೇಟು ನೀಡುವ ಮೂಲಕ ಸರಣಿಯಲ್ಲಿ 2-2ರ ಸಮಬಲ ಸಾಧಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.