ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದ್ದ ಕ್ಯಾಮರೋನ್ ಗ್ರೀನ್ ಆಡಿದ 16 ಪಂದ್ಯಗಳಲ್ಲಿ ಒಂದು ಶತಕ ಸಹಿತ 452 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 6 ವಿಕೆಟ್ ಕಬಳಿಸಿದ್ದರು.

ಬೆಂಗಳೂರು(ಡಿ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡಿಂಗ್ ಮಾಡಿಕೊಂಡಿದೆ. ಇದು ಆರ್‌ಸಿಬಿ ಮಾಡಿದ ಕೆಟ್ಟ ತೀರ್ಮಾನವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಕಾರಣ ಸಹಿತ ವಿವರಿಸಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದ್ದ ಕ್ಯಾಮರೋನ್ ಗ್ರೀನ್ ಆಡಿದ 16 ಪಂದ್ಯಗಳಲ್ಲಿ ಒಂದು ಶತಕ ಸಹಿತ 452 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 6 ವಿಕೆಟ್ ಕಬಳಿಸಿದ್ದರು. ಆದರೆ ಇದೀಗ 2024ರ ಐಪಿಎಲ್ ಟೂರ್ನಿಗೂ ಮುನ್ನ ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕರೆತರುವ ಉದ್ದೇಶದಿಂದ ಕ್ಯಾಮರೋನ್ ಗ್ರೀನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಗೆ ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿತ್ತು.

'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್

ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಮೊತ್ತದ ಟ್ರೇಡಿಂಗ್ ಮಾಡುವ ಮೂಲಕ ಗಮನ ಸೆಳೆದಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಕ್ಯಾಮರೋನ್ ಗ್ರೀನ್ ಅವರನ್ನು 17.5 ಕೋಟಿ ರುಪಾಯಿಗೆ ಆರ್‌ಸಿಬಿ ಟ್ರೇಡ್ ಮಾಡಿದ್ದು ಒಳ್ಳೆಯ ನಿರ್ಧಾರವಲ್ಲ ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. 

View post on Instagram

'ಆರ್‌ಸಿಬಿ ಫ್ರಾಂಚೈಸಿಯು ತಮ್ಮ ಬೌಲಿಂಗ್ ಲೈನ್‌ಅಪ್‌ಗಾಗಿ ಈಗಾಗಲೇ ದೊಡ್ಡ ಮೊತ್ತವನ್ನು ಖರ್ಚು ಮಾಡಿರುವುದರಿಂದ ಹಾಗೂ ಗುಣಮಟ್ಟದ ಬೌಲರ್‌ಗಳನ್ನು ಖರೀದಿಸುವ ವಿಚಾರದಲ್ಲಿ ಸ್ವಲ್ಪ ಎಡವುದರಿಂದ ಕ್ಯಾಮರೋನ್ ಗ್ರೀನ್ ಅವರನ್ನು ದುಬಾರಿ ಮೊತ್ತಕ್ಕೆ ಮುಂಬೈನಿಂದ ಟ್ರೇಡ್ ಮಾಡಿಕೊಂಡಿದ್ದು ಕಳಪೆ ತೀರ್ಮಾನವಾಗಿದೆ' ಎಂದು ಆಸೀಸ್ ಮಾಜಿ ಸ್ಪಿನ್ನರ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಐಪಿಎಲ್ ತಂಡದ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳಿವರು..! 2 ಟೀಂನಲ್ಲಿ ರಾಹುಲ್ ಟಾಪ್ ಸ್ಕೋರರ್

'ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡ್‌ ಮಾಡಿ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದು ಮುಂಬೈ ಇಂಡಿಯನ್ಸ್ ಪಾಲಿಗೆ ಒಳ್ಳೆಯ ನಡೆಯಾಗಿದೆಯಾದರೂ, ಆರ್‌ಸಿಬಿ ಇದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ' ಎಂದು ಹಾಗ್ ಹೇಳಿದ್ದಾರೆ

ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರಿವರು:

ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾದವ್ 

ಹರಾಜಿಗೂ ಮುನ್ನ ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರರಿವರು:

ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್, ರಜತ್ ಪಾಟೀದಾರ್, ರೀಸ್ ಟಾಪ್ಲೆ, ವಿಲ್ ಜೇಕ್ಸ್‌, ಸುಯಾಶ್ ಪ್ರಭುದೇಸಾಯಿ, ಅನುಜ್ ರಾವತ್, ಮಹಿಪಾಲ್ ಲೋಮ್ರರ್, ಮನೋಜ್ ಭಾಂಡ್ಗೆ, ಕರ್ಣ್ ಶರ್ಮಾ, ಮಯಾಂಕ್ ಡಾಗರ್, ವೈಶಾಖ್ ವಿಜಯ್‌ಕುಮಾರ್, ಆಕಾಶ್ ದೀಪ್, ರಜನ್ ಕುಮಾರ್, ಹಿಮಾಂಶು ಶರ್ಮಾ.

ಇನ್ನು ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಮುಂಬೈನಿಂದ ಆಸೀಸ್ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದೀಗ ಮುಂಬರುವ ಐಪಿಎಲ್ ಆಟಗಾರರ ಹರಾಜಿಗೆ ಆರ್‌ಸಿಬಿ ಪರ್ಸ್‌ನಲ್ಲಿ 23.25 ಕೋಟಿ ರುಪಾಯಿ ಉಳಿದುಕೊಂಡಿದೆ.