ದುಬೈನಲ್ಲಿ IPL 2020 ಆಯೋಜನೆಗೆ CAIT ವಿರೋಧ; ಕೇಂದ್ರ ಸರ್ಕಾರಕ್ಕೆ ಪತ್ರ!
ಹಲವು ಅಡೆ ತಡೆ ನಿವಾರಿಸಿದ ಬಿಸಿಸಿಐ IPL 2020 ಟೂರ್ನಿ ಆಯೋಜನೆಗೆ ಸಕಲ ಸಿದ್ಧತೆ ನಡೆಸಿದೆ. ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ದುಬೈನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ದುಬೈನಲ್ಲಿ ಐಪಿಎಲ್ ಆಯೋಜನೆಗೆ CAIT ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಐಪಿಎಲ್ ಟೂರ್ನಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ನವದೆಹಲಿ(ಆ.04): ಪ್ರತಿ ವರ್ಷ ಐಪಿಎಲ್ ಟೂರ್ನಿ ಆಯೋಜನೆ ಬಿಸಿಸಿಐ ಹೆಚ್ಚಿನ ಸವಾಲು ಒಡ್ಡುತ್ತಿದೆ. 2012ರ ಸ್ಫಾಟ್ ಫಿಕ್ಸಿಂಗ್ ಆರೋಪದ ಬಳಿಕ ಪ್ರತಿ ಆವೃತ್ತಿ ಆಯೋಜನೆ ಹಲವು ಸಂಕಷ್ಟಗಳು ಎದುರಾಗಿದೆ. ಕಳ್ಳಾಟ ನಡೆಯುತ್ತಿರುವ ಐಪಿಎಲ್ ನಿಷೇಧಿಸಲು ಆಗ್ರಹ, CSK, ರಾಜಸ್ಥಾನ ರಾಯಲ್ಸ್ ತಂಡದ ಅಮಾನತು, ಬರಗಾಲ, ಲೋಕಸಭೆ ಚುನಾವಣೆ ಸೇರಿದಂತೆ ಹಲವು ಅಡೆತಡೆಗಳನ್ನು ನಿವಾರಿಸಿ ಬಿಸಿಸಿಐ ಐಪಿಎಲ್ ಆಯೋಜಿಸಿದೆ. ಈ ವರ್ಷ ಕೊರೋನಾ ಹಾವಳಿ ಬಿಸಿಸಿಐನ್ನೂ ಇನ್ನಿಲ್ಲದೆ ಕಾಡಿದೆ. ಆದರೆ ಸಂಕಷ್ಟ ನಿವಾರಿಸಿ ದುಬೈನಲ್ಲಿ ಐಪಿಎಲ್ ಆಯೋಜನೆಗೆ ಸಜ್ಜಾದ ಬಿಸಿಸಿಐಗೆ ಮತ್ತೆ ವಿಘ್ನ ಎದುರಾಗಿದೆ.
ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!.
ದುಬೈನಲ್ಲಿ ಸೆಪ್ಟೆಂಬರ್ 19 ರಿಂದ ಐಪಿಎಲ್ 2020 ಆಯೋಜನೆಗೊಳ್ಳುತ್ತಿದೆ. ಇದೀಗ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT)ದುಬೈನಲ್ಲಿ ಐಪಿಎಲ್ ಆಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಚೀನಾ ಪ್ರಾಯೋಜಕತ್ವ ನಿರಾಕರಿಸದಿರುವ ಬಿಸಿಸಿಐ ನಿರ್ಧಾರಕ್ಕೆ ಗರಂ ಆಗಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಪತ್ರ ಬರೆದಿದೆ.
ಕೇಂದ್ರ ಸರ್ಕಾರ ದುಬೈನಲ್ಲಿ ಐಪಿಎಲ್ ಆಯೋಜಿಸಲು ಅನುಮತಿ ನೀಡಿರುವುದನ್ನು ಹಿಂಪಡೆಯಬೇಕು ಎಂದು CAIT ಆಗ್ರಹಿಸಿದೆ. ಟಿ20 ವಿಶ್ವಕಪ್ ಸೇರಿದಂತೆ ಹಲವು ಕ್ರೀಡಾಕೂಟಗಳನ್ನು ರದ್ದು ಮಾಡಲಾಗಿದೆ. ಭಾರತದಲ್ಲಿ ಆಯೋಜನೆ ಸಾಧ್ಯವಾಗದಿದ್ದರೆ ಐಪಿಎಲ್ ರದ್ದು ಮಾಡಿ ಎಂದು CAIT ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ದುಬೈನಲ್ಲಿ ಆಯೋಜನೆಯಿಂದ ಇಲ್ಲಿನ ವರ್ತಕರಿಗೆ ನಷ್ಟವಾಗಲಿದೆ ಎಂದಿದೆ.