ಬುಶ್ ಫೈರ್ ಪಂದ್ಯ: ಗಿಲ್ಲಿ ಎದುರು ಪಾಂಟಿಂಗ್ ಪಡೆಗೆ ರೋಚಕ ಜಯ
ಬುಶ್ ಫೈರ್ ಸ್ಮರಣಾರ್ಥ ಪಂದ್ಯದಲ್ಲಿ ಗಿಲ್‌ಕ್ರಿಸ್ಟ್ XI ತಂಡದ ವಿರುದ್ಧ ಪಾಂಟಿಂಗ್ XI ತಂಡ 1 ರನ್ ರೋಚಕ ಜಯ ಸಾಧಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಮೆಲ್ಬೊರ್ನ್(ಫೆ.09): ಪಾಂಟಿಂಗ್ XI ಹಾಗೂ ಗಿಲ್‌ಕ್ರಿಸ್ಟ್ XI ನಡುವಿನ ಬುಶ್ ಫೈರ್ ಬ್ಯಾಸ್ ಲೀಗ್ ಸಹಾಯಾರ್ಥ ಪಂದ್ಯದಲ್ಲಿ ಪಾಂಟಿಂಗ್ XI ಒಂದು ರನ್ ರೋಚಕ ಜಯ ಸಾಧಿಸಿದೆ.
ಪಾಂಟಿಂಗ್ ಪಡೆ ನೀಡಿದ್ದ 105 ರನ್‌ಗಳ ಗುರಿ ಬೆನ್ನತ್ತಿದ ಗಿಲ್ಲಿ ಪಡೆ ಸ್ಫೋಟಕ ಆರಂಭ ಪಡೆಯಿತು. ಕೇವಲ 3 ಓವರ್‌ಗಳಲ್ಲಿ ಗಿಲ್‌ಕ್ರಿಸ್ಟ್-ಶೇನ್ ವಾಟ್ಸನ್ 49 ರನ್ ಚಚ್ಚಿದರು. ಇನ್ನು ಯುವರಾಜ್ ಸಿಂಗ್ ಕೇವಲ 2 ರನ್‌ಗಳಿಸಿ ಬ್ರೆಟ್ ಲೀಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಸೈಮಂಡ್ಸ್ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 29 ರನ್ ಬಾರಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 4 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ನಿಕ್ ರೈವಾಲ್ಟ್ 3 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಪಾಂಟಿಂಗ್ ಪಡೆ ಒಂದು ರನ್‌ಗಳ ವಿರೋಚಿತ ಜಯ ದಾಖಲಿಸಿತು.
ಬುಶ್ ಫೈರ್ ಮ್ಯಾಚ್: ಸಚಿನ್-ಯುವಿ ಮುಖಾಮುಖಿ
ಟಾಸ್ ಗೆದ್ದ ಗಿಲ್‌ಕ್ರಿಸ್ಟ್ XI ತಂಡ ಪೀಲ್ಡಿಂಗ್ ಮಾಡಲು ತೀರ್ಮಾನಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಂಟಿಂಗ್ XI ತಂಡದ ನಾಯಕ ರಿಕಿ ಪಾಂಟಿಂಗ್(26) ಹಾಗೂ ಬ್ರಿಯಾನ್ ಲಾರಾ(30) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿತ್ತು. ಗಿಲ್ಲಿ ಪಡೆ ಪರ ಕರ್ಟ್ನಿ ವಾಲ್ಷ್, ಯುವರಾಜ್ ಸಿಂಗ್ ಹಾಗೂ ಆಂಡ್ರೂ ಸೈಮಂಡ್ಸ್ ತಲಾ ಒಂದೊದು ವಿಕೆಟ್ ಪಡೆದರು.
2019ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಕಾಡ್ಗಿಚ್ಚು ಸಂಭವಿಸಿತ್ತು. ಸಾವಿರಾರು ಮಂದಿ ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದರು. ಇವರ ಸಂಕಷ್ಟಕ್ಕೆ ನೆರವಾಗಲು ವಿಶ್ವದ ದಿಗ್ಗಜ ಮಾಜಿ ಕ್ರಿಕೆಟಿಗರು ನಿವೃತ್ತಿ ಪಾಪಾಸ್ ಪಡೆದು ಸಹಾಯಾರ್ಥ ಪಂದ್ಯವನ್ನಾಡಿದರು. ಈ ಪಂದ್ಯದಿಂದ ಬಂದ ಹಣವನ್ನು ಆಸ್ಟ್ರೇಲಿಯಾ ರೆಡ್ ಕ್ರಾಸ್ ಪರಿಹಾರ ನಿಧಿಗೆ ನೀಡಲಿದ್ದಾರೆ.