ಬ್ರಿಸ್ಬೇನ್‌(ಜ.19): ಭಾರತ-ಆಸ್ಟ್ರೇಲಿಯಾ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಓವರ್‌ನಿಂದ ಓವರ್‌ಗೆ ರೋಚಕತೆ ಹೆಚ್ಚುವಂತೆ ಮಾಡಿದ್ದು, ಟೀಂ ಇಂಡಿಯಾ ಗೆಲುವಿನತ್ತ ದಿಟ್ಟ ಹೆಜ್ಜೆ ಇಡಲಾರಂಭಿಸಿದೆ. ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 183 ರನ್‌ ಬಾರಿಸಿದ್ದು, ಕೊನೆಯ ಸೆಷನ್‌ನಲ್ಲಿ ಗೆಲ್ಲಲು ಭಾರತಕ್ಕೆ 145 ರನ್‌ಗಳ ಅಗತ್ಯವಿದೆ.

ಮೊದಲ ಲಂಚ್‌ ಬ್ರೇಕ್ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 83 ರನ್‌ ಬಾರಿಸಿದ್ದ ಟೀಂ ಇಂಡಿಯಾ ಆ ಬಳಿಕವೂ ಎಚ್ಚರಿಕೆಯ ಆಟಕ್ಕೆ ಮೊರೆ ಹೋಯಿತು. ಪೂಜಾರ ಹಾಗೂ ಗಿಲ್‌ ಜೋಡಿ ಎರಡನೇ ವಿಕೆಟ್‌ಗೆ 114 ರನ್‌ಗಳ ಜತೆಯಾಟವಾಡಿತು. ಶುಭ್‌ಮನ್‌ ಗಿಲ್‌ 91 ರನ್‌ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾಗ ನೇಥನ್‌ ಲಯನ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಸ್ಟೀವ್ ಸ್ಮಿತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಈ ಮೂಲಕ ಕೇವಲ 9 ರನ್‌ ಅಂತರದಲ್ಲಿ ಚೊಚ್ಚಲ ಶತಕವಂಚಿತರಾದರು. 

ಬ್ರಿಸ್ಬೇನ್‌ ಟೆಸ್ಟ್‌: ಗಿಲ್ ಆಕರ್ಷಕ ಫಿಫ್ಟಿ, ಆಸೀಸ್‌ಗೆ ಟೀಂ ಇಂಡಿಯಾ ತಿರುಗೇಟು

ಗಿಲ್‌ ವಿಕೆಟ್ ಪತನದ ಬಳಿಕ ನಾಯಕ ಅಜಿಂಕ್ಯ ರಹಾನೆ ಚುರುಕಿನ ಬ್ಯಾಟಿಂಗ್‌ಗೆ ಮೊರೆ ಹೋದರು. ರಹಾನೆ ಕೇವಲ 22 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 24 ರನ್‌ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ತಾಳ್ಮೆಯ ಆಟ ಮುಂದುವರೆಸಿರುವ ಚೇತೇಶ್ವರ್ ಪೂಜಾರ 168 ಎಸೆತಗಳನ್ನು ಎದುರಿಸಿ 43 ರನ್‌ ಬಾರಿಸಿದ್ದರೆ, ರಿಷಭ್ ಪಂತ್ 10 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಎರಡನೇ ಸೆಷನ್‌ನಲ್ಲಿ 25 ಓವರ್‌ ಎದುರಿಸಿ 2 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ 100 ರನ್‌ ಕಲೆಹಾಕಿದ್ದು, ಟೆಸ್ಟ್ ಸರಣಿ ಗೆಲ್ಲಲು 37 ಓವರ್‌ಗಳಲ್ಲಿ 145 ರನ್‌ಗಳ ಅಗತ್ಯವಿದೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: 369&294

ಭಾರತ: 336&183/3
ಶುಭ್‌ಮನ್‌ ಗಿಲ್‌: 91
ಕಮಿನ್ಸ್: 22/1
(* 5ನೇ ದಿನದಾಟದ ಚಹಾ ವಿರಾಮದ ವೇಳೆಗೆ)