ಬ್ರಿಸ್ಬೇನ್ ಟೆಸ್ಟ್: ಮಳೆಗೆ ಆಹುತಿಯಾದ ಎರಡನೇ ದಿನದಾಟ
ಭಾರತ-ಆಸ್ಟ್ರೇಲಿಯಾ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಕೊನೆಯ ಸೆಷನ್ ಮಳೆಗೆ ಆಹುತಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ರಿಸ್ಬೇನ್(ಜ.16): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ದಿನದಾಟದ ಮೂರನೇ ಸೆಷನ್ ಮಳೆಯಿಂದಾಗಿ ಸಂಪೂರ್ಣ ರದ್ದಾಗಿದೆ. ಇದರೊಂದಿಗೆ ಎರಡನೇ ದಿನದಾಟದಂತ್ಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ.
ಹೌದು, ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಆಸ್ಟ್ರೇಲಿಯಾ ತಂಡ 369 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಎರಡನೇ ಸೆಷನ್‌ನಲ್ಲಿ 26 ಓವರ್ ಬೌಲಿಂಗ್ ಎದುರಿಸಿದ ಟೀಂ ಇಂಡಿಯಾ ಆರಂಭಿಕ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಕೇವಲ 62 ರನ್ ಗಳಿಸಿದೆ. ರೋಹಿತ್ ಶರ್ಮಾ 44 ರನ್ ಬಾರಿಸಿ ದೊಡ್ಡ ಹೊಡೆತಕ್ಕೆ ಯತ್ನಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು.
ಚಹಾ ವಿರಾಮಕ್ಕೆ ಪೆವಿಲಿಯನ್ನಿಗೆ ಬಂದು ಉಭಯ ತಂಡಗಳು ಆ ಬಳಿಕ ಕ್ರೀಸ್‌ಗಿಳಿಯಲು ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ನಿರಂತರವಾಗಿ ಮಳೆ ಸುರಿದಿದ್ದರಿಂದ ಎರಡನೇ ದಿನದಾಟದ ಕೊನೆಯ ಸೆಷನ್ ಮಳೆಗೆ ಆಹುತಿಯಾದಂತಾಯಿತು. ಸದ್ಯ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ 2 ರನ್ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 8 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ವರುಣನ ಕಾಟ
4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿನ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿವೆ. ಇನ್ನು ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.