ಮೆಲ್ಬರ್ನ್(ಡಿ.27): ನಾಯಕ ಅಜಿಂಕ್ಯ ರಹಾನೆ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆಯತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿದ್ದು, ಇನ್ನು ಕೇವಲ 6 ರನ್‌ಗಳ ಹಿನ್ನಡೆಯಲ್ಲಿದೆ.

ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 195 ರನ್‌ಗಳಿಗೆ ನಿಯಂತ್ರಿಸಿದ್ದ ಭಾರತ ತಂಡ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್‌ಗೆ ಮೊರೆ ಹೋಗಿದೆ. ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲೇ ಶುಭ್‌ಮನ್‌ ಗಿಲ್ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ 4ನೇ ವಿಕೆಟ್‌ಗೆ ಹನುಮ ವಿಹಾರಿ ಹಾಗೂ ಅಜಿಂಕ್ಯ ರಹಾನೆ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವಿಹಾರಿ 66 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 21 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ನಾಯಕನ ಆಟವಾಡಿದ ರಹಾನೆ: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಮೊದಲ ದಿನ ವಿಭಿನ್ನ ತಂತ್ರಗಾರಿಕೆಯ ಮೂಲಕ ಗಮನ ಸೆಳೆದಿದ್ದ ಅಜಿಂಕ್ಯ ರಹಾನೆ, ಎರಡನೇ ದಿನದಾಟದಲ್ಲಿ ಸಮಯೋಚಿತ ಬ್ಯಾಟಿಂಗ್‌ ಮೂಲಕ ನಾಯಕ ಆಟ ಪ್ರದರ್ಶಿಸಿದ್ದಾರೆ. ರಹಾನೆ 121 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 53 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ಗಿಲ್‌-ಪೂಜಾರ ಔಟ್‌..!

ರನ್‌ ವೇಗಕ್ಕೆ ಚುರುಕು ಮುಟ್ಟಿಸಿದ ಪಂತ್: ವಿಹಾರಿ ವಿಕೆಟ್ ಪತನದ ಬಳಿಕ ನಾಯಕ ರಹಾನೆ ಕೂಡಿಕೊಂಡ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್ ಟೀಂ ಇಂಡಿಯಾ ರನ್‌ ಗಳಿಕೆಗೆ ಚುರುಕು ಮುಟ್ಟಿಸಿದರು. 5ನೇ ವಿಕೆಟ್‌ಗೆ ಈ ಜೋಡಿ ಕೇವಲ 87 ಎಸೆತಗಳಲ್ಲಿ 57 ರನ್‌ಗಳ ಜತೆಯಾಟ ನಿಭಾಯಿಸಿತು. ಪಂತ್‌ 40 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 29 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಸದ್ಯ ರವೀಂದ್ರ ಜಡೇಜಾ(4) ನಾಯಕ ಅಜಿಂಕ್ಯ ರಹಾನೆ ಜತೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಜತೆಯಾಟದ ಮೇಲೆ ಟೀಂ ಇಂಡಿಯಾ ಮೇಲುಗೈ ಸಾಧಿಸುವ ಲೆಕ್ಕಾಚಾರ ತೀರ್ಮಾನವಾಗಲಿದೆ.