ಮೆಲ್ಬರ್ನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 474 ರನ್ ಗಳಿಸಿತು. ಸ್ಮಿತ್ (140) ಶತಕ ಬಾರಿಸಿದರು. ಭಾರತ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದು, 310 ರನ್ ಹಿನ್ನಡೆಯಲ್ಲಿದೆ. ಜೈಸ್ವಾಲ್ (82) ಉತ್ತಮ ಆಟವಾಡಿದರು. ಕೊಹ್ಲಿ (36) ಮತ್ತು ರಾಹುಲ್ (24) ನಿರಾಸೆ ಮೂಡಿಸಿದರು. ಫಾಲೋ-ಆನ್ ಭೀತಿ ಎದುರಿಸುತ್ತಿರುವ ಭಾರತಕ್ಕೆ ಅಭೂತಪೂರ್ವ ಹೋರಾಟ ಅನಿವಾರ್ಯ.

ಮೆಲ್ಬರ್ನ್: ಅಡಿಲೇಡ್ ಬಳಿಕ ಮೆಲ್ಬರ್ನ್ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದರೆ, ಇಂಡಿಯಾ ಆಕ್ಷರಶಃ ಬರ್ನ್ ಆಗಿದೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಮೇಲೆ ಹೆಚ್ಚಿನ ಅವಲಂಬನೆ, ಬ್ಯಾಟರ್‌ಗಳ ವೈಫಲ್ಯದಿಂದಾಗಿ ಭಾರತ ತಂಡ ಬಾಕ್ಸಿಂಗ್ ಡೇ ಟೆಸ್ಟ್‌ನ 2ನೇ ದಿನವೇ ಸೋಲಿನತ್ತ ಮುಖಮಾಡಿದೆ. ಕಳೆದ ಪಂದ್ಯದಂತೆಯೇ ಈ ಬಾರಿಯೂ ರೋಹಿತ್ ಶರ್ಮಾ ಬಳಗ ಫಾಲೋ-ಆನ್‌ಗೆ ತುತ್ತಾಗುವ ಭೀತಿಯಲ್ಲಿದ್ದು, ಅಭೂತಪೂರ್ವ ಹೋರಾಟ ಮಾತ್ರ ಸದ್ಯ ತಂಡದ ಮುಂದಿರುವ ದಾರಿ.

ಮೊದಲ ದಿನ 6 ವಿಕೆಟ್‌ಗೆ 311 ರನ್ ಕಲೆಹಾಕಿದ ಆಸ್ಟ್ರೇಲಿಯಾ, ಶುಕ್ರವಾರ 474 ರನ್‌ಗೆ ಆಲೌಟಾಯಿತು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಭಾರತ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿದೆ. ತಂಡ ಇನ್ನೂ 310 ರನ್ ಹಿನ್ನಡೆಯಲ್ಲಿದ್ದು, ಫಾಲೋ-ಆನ್ ತಪ್ಪಿಸಲು 111 ರನ್ ಗಳಿಸಿಬೇಕಿದೆ.

ಸ್ಯಾಮ್‌ ಕಾನ್ಸ್‌ಟಾಸ್‌ ಜೊತೆ ಕಿರಿಕ್,‌ ಕೊಹ್ಲಿಗೆ ಭಾರೀ ದಂಡ ವಿಧಿಸಿದ ಐಸಿಸಿ!

ಸ್ಮಿತ್ ಮತ್ತೆ ಸೆಂಚುರಿ: ಆಸೀಸ್ 2ನೇ ದಿನವೂ ಭಾರತೀಯರ ಮೇಲೆ ಸವಾರಿ ಮಾಡಿತು. ಮೊದಲ ಅವಧಿಯಲ್ಲೇ ತಂಡ 27 ಓವರ್‌ಗಳಲ್ಲಿ 5.30ರ ರನ್ ರೇಟ್‌ನಲ್ಲಿ 143 ರನ್ ಗಳಿಸಿತು. ಈ ಅವಧಿಯಲ್ಲಿ ಕಮಿನ್ಸ್ (49) ವಿಕೆಟ್ ಪಡೆದಿದ್ದೇ ಭಾರತದ ಸಾಧನೆ. ಗುರುವಾರ 68 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಸ್ಮಿತ್, ಕಮಿನ್ಸ್ ಜೊತೆಗೂಡಿ 7ನೇ ವಿಕೆಟ್‌ಗೆ 112 ರನ್ ಜೊತೆಯಾಟವಾಡಿದರು. ಭಾರತೀಯ ಬೌಲರ್ ಗಳನ್ನು ಚೆನ್ನಾಗಿ ದಂಡಿಸಿ ಸತತ 2ನೇ ಶತಕ ಪೂರ್ಣ ಗೊಳಿಸಿದ ಸ್ಮಿತ್, 197 ಎಸೆತಗಳಲ್ಲಿ 13 ಬೌಂಡರಿ, ಸಿಕರ್‌ಗಳೊಂದಿಗೆ 140 ರನ್ ಸಿಡಿಸಿ ಔಟಾದರು. 

ಈ ವೇಳೆಗಾಗಲೇ ತಂಡದ ಮೊತ್ತ 450ರ ಗಡಿ ದಾಟಿತ್ತು. ಬಾಕಿ ವಿಕೆಟ್‌ಗಳನ್ನು ಪಡೆಯಲು ಭಾರತಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ, ಬುಮ್ರಾ 4, ರವೀಂದ್ರ ಜಡೇಜಾ 3, ಆಕಾಶ್‌ದೀಪ್ 2, ವಾಷಿಂಗ್ಟನ್ 1 ವಿಕೆಟ್ ಕಿತ್ತರು. ಸಿರಾಜ್ (0/122) ಕಳಪೆ ಪ್ರದರ್ಶನ ಮುಂದುವರಿಸಿದರು. 

ರೋಹಿತ್‌ ರುಸ್: ದೀರ್ಘ ಕಾಲದಿಂದ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಈ ಪಂದ್ಯದಲ್ಲೂ ಠುಸ್ ಆದರು. ಮತ್ತೆ ಅಗ್ರಕ್ರಮಾಂಕದಲ್ಲಿ ಆಡಿದ ಅವರು ಕೇವಲ 3 ರನ್‌ಗೆ ವಿಕೆಟ್ ಒಪ್ಪಿಸಿದರು. 2ನೇ ವಿಕೆಟ್‌ಗೆ ಕೆ.ಎಲ್.ರಾಹುಲ್-ಯಶಸ್ವಿ ಜೈಸ್ವಾಲ್ 43 ರನ್ ಸೇರಿಸಿದರು. ಮತ್ತೊಂದು ಆಕರ್ಷಕ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದ ರಾಹುಲ್, ಕಮಿನ್ಸ್‌ ಬೆಂಕಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಬಾಕ್ಸಿಂಗ್ ಡೇ ಟೆಸ್ಟ್‌: ಟೀಂ ಇಂಡಿಯಾ ಎದುರು ಮೊದಲ ದಿನವೇ ತ್ರಿಶತಕ ದಾಖಲಿಸಿದ ಕಾಂಗರೂ ಪಡೆ!

ಶತಕದ ಜೊತೆಯಾಟ: 2 ವಿಕೆಟ್ ಬಿದ್ದಾಗ ಭಾರತಕ್ಕೆ ಉತ್ತಮ ಜೊತೆಯಾಟವೊಂದು ಅಗತ್ಯವಿತ್ತು. ಅದನ್ನು ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಪೂರೈಸಿದರು. ಈ ಜೋಡಿ 3ನೇ ವಿಕೆಟ್‌ಗೆ 102 ರನ್ ಸೇರಿಸಿತು. ಆದರೆ 118 ಎಸೆತಗಳಲ್ಲಿ 82 ರನ್ ಗಳಿಸಿದ್ದಾಗ ಜೈಸ್ವಾಲ್ ರನ್‌ಔಟ್ ಆಗುವುದರೊಂದಿಗೆ ತಂಡ ಮತ್ತೆ ಕುಸಿಯಿತು. ಕೆಲವೇ ಎಸೆತಗಳ ಬಳಿಕ ಕೊಹ್ಲಿ(36) ಬೋಲಂಡ್ ಎಸೆತದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕೇರಿಗೆ ಕ್ಯಾಚ್ ನೀಡಿದರು. ನೈಟ್ ವಾಚ್ ಮನ್ ಆಕಾಶ್‌ದೀಪ್ ರನ್ ಖಾತೆ ತೆರೆಯಲಿಲ್ಲ. ಸದ್ಯ ರಿಷಭ್ ಪಂತ್ (ಔಟಾಗದೆ 6) ಹಾಗೂ ರವೀಂದ್ರ ಜಡೇಜಾ (ಔಟಾಗದೆ 4) ಕ್ರೀಸ್‌ನಲ್ಲಿದ್ದು, ದೊಡ್ಡ ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಬೇಕಿದೆ. ಕಮಿನ್ಸ್, ಬೋಲಂಡ್ ತಲಾ 2 ವಿಕೆಟ್ ಕಿತ್ತರು.

ಸ್ಕೋರ್: ಆಸ್ಟ್ರೇಲಿಯಾ 474/10 (ಸ್ಮಿತ್ 140, ಕಮಿನ್ಸ್ 49, ಬೂಮ್ರಾ 4-99, ಜಡೇಜಾ 3-78, ಆಕಾಶ್‌ದೀಪ್ 2-94), ಭಾರತ 164/5 (2ನೇ ದಿನದಂತ್ಯಕ್ಕೆ) (ಜೈಸ್ವಾಲ್ 82, ಕೊಹ್ಲಿ 36, ರಾಹುಲ್ 24, ಬೋಲಂಡ್ 2-24, ಕಮಿನ್ಸ್ 2-57)

ಪಂದ್ಯದ ದಿಕ್ಕನ್ನೇ ಬದಲಿಸಿದ ಆ 20 ನಿಮಿಷ

ಶುಕ್ರವಾರ ಆರಂಭಿಕ ಅವಧಿ ಬಳಿಕ ಭಾರತ ಪಂದ್ಯದ ಮೇಲೆ ನಿಧಾನವಾಗಿ ಹಿಡಿತ ಸಾಧಿಸುವ ಕಾತರದಲ್ಲಿತ್ತು. ಕೊಹ್ಲಿ ಹಾಗೂ ಜೈಸ್ವಾಲ್ ನಡುವಿನ ಜೊತೆಯಾಟವೇ ಇದಕ್ಕೆ ಸಾಕ್ಷಿ. ಆದರೆ ದಿನದಾಟ ಕೊನೆಗೊಳ್ಳಲು ಇನ್ನೇನು 20 ನಿಮಿಷ ಬಾಕಿ ಇದ್ದಾಗ ಪಂದ್ಯ ಸಾಗುತ್ತಿದ್ದ ದಿಕ್ಕೇ ಬದಲಾಯಿತು. ಅನಿರೀಕ್ಷಿತ ರನ್‌ಔಟ್‌ಗೆ ಬಲಿಯಾಗಿ ಜೈಸ್ವಾಲ್‌ ಪೆವಿಲಿಯನ್‌ಗೆ ಮರಳಿದರು. ಆದಾಗಿ 7ನೇ ಎಸೆತದಲ್ಲೇ ಕೊಹ್ಲಿ ಕೂಡಾ ಔಟ್. ತಂಡಕ್ಕೆ ಆಧಾರಸ್ತಂಭವೇ ಕುಸಿದ ಅನುಭವ. ಬಳಿಕ ಆಕಾಶ್‌ದೀಪ್ ಕೂಡಾ ಔಟಾದರು. ಒಂದು ಹಂತದಲ್ಲಿ 2 ವಿಕೆಟ್‌ಗೆ 153 ರನ್ ಗಳಿಸಿದ್ದ ಭಾರತ, 20 ನಿಮಿಷಗಳಲ್ಲೇ 164ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.