ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ 6 ವಿಕೆಟ್‌ಗೆ 311 ರನ್ ಗಳಿಸಿದೆ. ಕೊನ್‌ಸ್ಟಾಸ್ (60), ಖವಾಜ (57), ಲಬುಶೇನ್ (72) ಮತ್ತು ಸ್ಮಿತ್ (68*) ಅರ್ಧಶತಕಗಳನ್ನು ಸಿಡಿಸಿದರು. ಬುಮ್ರಾ 3 ವಿಕೆಟ್ ಪಡೆದರು.

ಮೆಲ್ಬರ್ನ್‌: ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನವೇ ತ್ರಿಶತಕದ ಗಡಿ ದಾಟಿದೆ. ಸ್ಯಾಮ್ ಕೊನ್‌ಸ್ಟಾಸ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್ ಹಾಗೂ ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಕಾಂಗರೂ ಪಡೆ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುವ ಮುನ್ಸೂಚನೆ ನೀಡಿದೆ.

ಇಲ್ಲಿನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಸೀಸ್‌ ಬ್ಯಾಟರ್‌ಗಳು ಆಟವಾಡಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಸ್ಯಾಮ್ ಕೊನ್‌ಸ್ಟಾಸ್‌ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡರು. ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಯಾಮ್ ಕೊನ್‌ಸ್ಟಾಸ್‌ 60 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್‌ಗೆ ಖವಾಜ ಹಾಗೂ ಸ್ಯಾಮ್ ಕೊನ್‌ಸ್ಟಾಸ್‌ ಜೋಡಿ 89 ರನ್‌ಗಳ ಜತೆಯಾಟವಾಡಿದರು.

ಮುಂದಿನ ಟೆಸ್ಟ್‌ನಿಂದ ಬ್ಯಾನ್ ಆಗ್ತಾರಾ ವಿರಾಟ್ ಕೊಹ್ಲಿ? ಐಸಿಸಿ ರೂಲ್ ಬುಕ್ ಏನು ಹೇಳುತ್ತೆ?

ಇನ್ನು ಮತ್ತೊಂದು ತುದಿಯಲ್ಲಿ ಉಸ್ಮಾನ್ ಖವಾಜ 121 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 57 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಹಾಗೂ ಸ್ಟೀವ್ ಸ್ಮಿತ್ ಆಕರ್ಷಕ ಜತೆಯಾಟ ನಿಭಾಯಿಸಿದರು. ಲಬುಶೇನ್ 145 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 72 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡುತ್ತಿರುವ ಸ್ಟೀವ್ ಸ್ಮಿತ್ 111 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 68 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Scroll to load tweet…

9 ರನ್ ಅಂತರದಲ್ಲಿ ಮೂರು ವಿಕೆಟ್ ಪತನ: ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ ಅನಾಯಾಸವಾಗಿ ರನ್ ಗಳಿಸುತ್ತಾ ಸಾಗಿದರು. ಆದರೆ ವಾಷಿಂಗ್ಟನ್ ಸುಂದರ್, ಲಬುಶೇನ್ ಅವರನ್ನು ಬಲಿ ಪಡೆಯುತ್ತಿದ್ದಂತೆಯೇ ಆಸೀಸ್ ನಾಟಕೀಯ ಕುಸಿತ ಕಂಡಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಟ್ರ್ಯಾವಿಸ್ ಹೆಡ್ ಖಾತೆ ತೆರೆಯುವ ಮುನ್ನವೇ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ, ಮಿಚೆಲ್ ಮಾರ್ಷ್ ಬ್ಯಾಟಿಂಗ್ 4 ರನ್‌ಗಳಿಗೆ ಸೀಮಿತವಾಯಿತು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಷ್ ಕ್ಯಾರಿ 31 ರನ್ ಗಳಿಸಿ ಆಕಾಶ್‌ದೀಪ್‌ಗೆ ವಿಕೆಟ್ ಒಪ್ಪಿಸಿದರು. 

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಕೊಹ್ಲಿ ಭುಜಕ್ಕೆ ಭುಜ ತಾಗಿಸಿದ 19ರ ಪೋರ ಸ್ಯಾಮ್ ಕೊನ್‌ಸ್ಟಾಸ್‌! ವಿಡಿಯೋ ವೈರಲ್

ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಆಕಾಶ್‌ದೀಪ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.