ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಫೆಬ್ರವರಿ 09ರಿಂದ ಆರಂಭಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದಿಂದ ಮೈಂಡ್‌ಗೇಮ್ ಆರಂಭ ನಮ್ಮಲ್ಲೂ ಸಾಕಷ್ಟು ಸ್ಪಿನ್ ಆಯ್ಕೆಗಳಿವೆ ಎಂದ ಪ್ಯಾಟ್ ಕಮಿನ್ಸ್‌

ಬೆಂಗಳೂರು(ಫೆ.05): ಭಾರತ ವಿರುದ್ಧ ಸರಣಿ ನಮಗೆ ದೊಡ್ಡ ಸವಾಲು. ಅವರ ದಾಖಲೆಗಳು ಉತ್ತಮವಾಗಿದೆ. ಆದರೆ ಟೆಸ್ಟ್‌ ಸರಣಿಗೆ ನಾವು ಕಠಿಣ ತಯಾರಿ ನಡೆಸಿದ್ದೇವೆ ಎಂದು ಆಸ್ಪ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಹೇಳಿದರು. ಶನಿವಾರ ಅವರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ತಂಡದ ಸ್ಪಿನ್‌ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳಿವೆ. ನೇಥನ್‌ ಲಯನ್‌ಗೆ ಸೂಕ್ತ ಬೆಂಬಲ ನೀಡಲು ಹಲವು ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ನರ್‌ಗಳ ಬಗ್ಗೆ ಮಾತನಾಡುವಾಗ ನಮ್ಮ ವೇಗದ ಬೌಲಿಂಗ್‌ ಪಡೆಯನ್ನು ಮರೆಯುವಂತಿಲ್ಲ. ನಮ್ಮ ವೇಗಿಗಳು ಯಾವುದೇ ವಾತಾವರಣದಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲಾ 20 ವಿಕೆಟ್‌ ಕಬಳಿಸುವ ಬೌಲರ್‌ಗಳನ್ನೇ ಕಣಕ್ಕಿಳಿಸುತ್ತೇವೆ’ ಎಂದರು. ಅದರೆ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ, ನಾಗ್ಪುರಕ್ಕೆ ತೆರಳಿ ಪಿಚ್‌ ಪರಿಸ್ಥಿತಿ ನೋಡಿದ ಬಳಿಕವೇ ಈ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು. ಆಸೀಸ್‌ ಆಟಗಾರರು ಸದ್ಯ ಬೆಂಗಳೂರಿನ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ತರಬೇತಿ ನಿರತರಾಗಿದ್ದು, ಎರಡು ದಿನಗಳಲ್ಲಿ ನಾಗ್ಪುರಕ್ಕೆ ತೆರಳಲಿದ್ದಾರೆ.

ವಾಕ್ಸಮರ ಶುರು

ಮಹತ್ವದ ಸರಣಿಗೂ ಮುನ್ನ ಸಾಮಾನ್ಯವೆಂಬಂತೆ ಆಟಗಾರರ ನಡುವೆ ವಾಕ್ಸಮರ ಶುರುವಾಗಿದ್ದು, ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್‌ ಹೀಲಿಗೆ ಭಾರತದ ಆರ್‌.ಅಶ್ವಿನ್‌ ತಿರುಗೇಟು ನೀಡಿದ್ದಾರೆ. ‘ಭಾರತ ನ್ಯಾಯಯುತ ಪಿಚ್‌ಗಳನ್ನು ಸಿದ್ಧಪಡಿಸಿದರೆ, ಉತ್ತಮ ಬ್ಯಾಟಿಂಗ್‌ ಪಿಚ್‌ ಆಗಿದ್ದರೆ ಪಂದ್ಯ 5 ದಿನ ನಡೆಯುತ್ತದೆ. ಆಸ್ಪ್ರೇಲಿಯಾ ಗೆಲ್ಲುತ್ತದೆ’ ಎಂದಿದ್ದರೆ. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್‌, ಆಸ್ಪ್ರೇಲಿಯಾ ಪ್ರವಾಸದಲ್ಲಿ ಅವರು ನಮಗೆ ಪೂರಕವಾಗುವ ರೀತಿ ಪಿಚ್‌ಗಳನ್ನು ತಯಾರಿಸುವುದಿಲ್ಲ. ಮಹತ್ವದ ಸರಣಿಗೂ ಮುನ್ನ ಆಸೀಸ್‌ ಈ ರೀತಿ ಮೈಂಡ್‌ಗೇಮ್‌ ಆಡುವುದು ಸಹಜ’ ಎಂದು ಕುಟುಕಿದ್ದಾರೆ.

"ಈತ ನಮ್ಮ ತಂಡದ ಬ್ಯಾಟಿಂಗ್ ಬೆನ್ನೆಲುಬು" ಎಂದ ರವಿಚಂದ್ರನ್ ಅಶ್ವಿನ್‌..! ಯಾರದು?

ಟೆಸ್ಟ್‌ ಪಾದಾರ್ಪಣೆ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ಯಾದವ್

ನಾಗ್ಪುರ: ಬೆನ್ನು ನೋವಿನಿಂದ ಬಳಲುತ್ತಿರುವ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಅಸ್ಪ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಗೈರಾಗುವ ಸಾಧ್ಯತೆ ಇದ್ದು, ಅವರ ಬದಲು ಸೂರ್ಯಕುಮಾರ್‌ ಯಾದವ್‌ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಕೆಲ ದಿನಗಳಿಂದಲೂ ಸೂರ್ಯಕುಮಾರ್‌ ಪಾದಾರ್ಪಣೆ ಬಗ್ಗೆ ಸುದ್ದಿ ಹರಡುತ್ತಿದ್ದರೂ ಶನಿವಾರ ಸೂರ್ಯಕುಮಾರ್‌ ಇನ್‌ಸ್ಟಾಗ್ರಾಂನಲ್ಲಿ ಹಾಕಿ ಸ್ಟೋರಿ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. 

ಟೆಸ್ಟ್‌ ಕ್ರಿಕೆಟ್‌ನ ರೆಡ್‌ ಬಾಲ್‌ ಫೋಟೋ ಹಾಕಿ ಹಲೋ ಸ್ನೇಹಿತಾ ಎಂದು ಬರೆದುಕೊಂಡಿದ್ದಾರೆ. ಇದು ಸೂರ್ಯಕುಮಾರ್ ಟೆಸ್ಟ್‌ ಪಾದಾರ್ಪಣೆ ಮಾಡುವ ಮುನ್ಸೂಚನೆ ಎಂದು ಹಲವರು ವಿಶ್ಲೇಷಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.