* ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ* ಫೆಬ್ರವರಿ 09ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ* ವಿರಾಟ್ ಕೊಹ್ಲಿ ನಮಗೆ ದೊಡ್ಡ ಭೀತಿ ಎಂದ ಮಾರ್ಕಸ್ ಸ್ಟೋನಿಸ್‌

ಮೆಲ್ಬೊರ್ನ್‌(ಜ.28): ಮುಂದಿನ ತಿಂಗಳು ಆಸ್ಟ್ರೇಲಿಯಾ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಬಂದಿಳಿಯಲಿದೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯೇ ನಮ್ಮ ಪಾಲಿನ ಅತಿದೊಡ್ಡ ಭೀತಿ ಎನ್ನುವುದನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಒಪ್ಪಿಕೊಂಡಿದ್ದಾರೆ. 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಫೆಬ್ರವರಿ 09ರಂದು ನಾಗ್ಪುರದಲ್ಲಿ ಆರಂಭವಾಗಲಿದೆ.

ಎಎನ್‌ಐ ಸುದ್ದಿಸಂಸ್ಥೆಯ ಜತೆ ಮಾತನಾಡಿರುವ ಮಾರ್ಕಸ್ ಸ್ಟೋನಿಸ್, ಆಸ್ಟ್ರೇಲಿಯಾ ತಂಡವು ಈ ಬಾರಿ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಸೋಲಲು ಬಯಸುವುದಿಲ್ಲ. ಈ ಬಾರಿ ಟ್ರೋಫಿ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾರ್ಕಸ್ ಸ್ಟೋನಿಸ್ ಹೇಳಿದ್ದಾರೆ. "ನಾವು ಈ ಬಾರಿ ಟ್ರೋಫಿ ಕಳೆದುಕೊಳ್ಳಲು ಬಯಸುವುದಿಲ್ಲ. ನಾವು ಸತತ ಮೂರನೇ ಬಾರಿಗೆ ಈ ಸರಣಿ ಸೋಲಲು ಬಯಸುವುದಿಲ್ಲ. ಈ ಬಾರಿ ಸರಣಿ ಸೋಲುವ ಪ್ರಶ್ನೆಯೇ ಇಲ್ಲ" ಎಂದು ಸ್ಟೋನಿಸ್ ಹೇಳಿದ್ದಾರೆ.

33 ವರ್ಷದ ಸ್ಟೋನಿಸ್, ಭಾರತವನ್ನು ಅವರದ್ದೇ ನೆಲದಲ್ಲಿ ಎದುರಿಸುವುದು ಅಷ್ಟು ಸುಲಭವೇನಲ್ಲ ಎನ್ನುವ ಮಾತನ್ನು ಒಪ್ಪಿಕೊಂಡಿದ್ದಾರೆ. ಯಾಕೆಂದರೆ ಭಾರತವು ಸ್ಪಿನ್ ಸ್ನೇಹಿ ಪಿಚ್ ಆಗಿದೆ, ಆದರೆ ಆಸ್ಟ್ರೇಲಿಯಾ ಕೂಡಾ ಬಲಾಢ್ಯ ತಂಡವನ್ನು ಹೊಂದಿದೆ ಎನ್ನುವ ವಿಚಾರವನ್ನು ಸ್ಟೋನಿಸ್ ಎಂದು ಅಭಿಪ್ರಾಯಪಟ್ಟಿದ್ದಾರೆ.

"ನಮ್ಮ ತಂಡವು ಕೂಡಾ ಸಾಕಷ್ಟು ಬಲಿಷ್ಠವಾಗಿದ್ದು, ಭಾರತವನ್ನು ಅವರದ್ದೇ ನೆಲದಲ್ಲಿ ಎದುರಿಸುವುದು ಸ್ವಲ್ಪ ಕಠಿಣವಾದದ್ದು ಎನ್ನುವುದು ಗೊತ್ತಿದೆ. ಯಾಕೆಂದರೇ ನಾವಿಲ್ಲಿ ಸ್ಪಿನ್ ಪಿಚ್‌ನಲ್ಲಿ ಆಡಬೇಕಿದೆ ಎಂದು ಸ್ಟೋನಿಸ್ ಹೇಳಿದ್ದಾರೆ.

ಸರ್ಫರಾಜ್ ಖಾನ್‌ಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? ಕೊನೆಗೂ ಮೌನ ಮುರಿದ ಬಿಸಿಸಿಐ..!

ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜಾ ಅವರಂತಹ ತಜ್ಞ ಸ್ಪಿನ್ನರ್‌ಗಳಿದ್ದಾರೆ . ಅವರು ಚೆನ್ನಾಗಿಯೇ ಬೌಲಿಂಗ್ ಮಾಡುತ್ತಾರೆ. ಆದರೆ ಈ ಬಾರಿ ನಾವು ಕೆಲವು ತಜ್ಞ ಸ್ಪಿನ್ನರ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ನಾವು ಈ ಬಾರಿ ಸ್ಪರ್ಧಾತ್ಮಕ ಟೂರ್ನಿಯನ್ನು ನಿರೀಕ್ಷಿಸಬಹುದು ಎಂದು ಸ್ಟೋನಿಸ್ ಹೇಳಿದ್ದಾರೆ.

"ವಿರಾಟ್ ಕೊಹ್ಲಿ ಅವರೊಬ್ಬ ವಿಶ್ವದರ್ಜೆಯ ಬ್ಯಾಟರ್. ಅವರೀಗ ಫಾರ್ಮ್‌ಗೆ ಮರಳಿದ್ದು, ಸದ್ಯ ಅವರೊಬ್ಬ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಅವರು ನಮಗೆ ದೊಡ್ಡ ಭೀತಿಯಾಗಿ ಪರಿಣಮಿಸಿದ್ದಾರೆ. ಆದರೆ ಈ ಬಾರಿ ರಿಷಭ್ ಪಂತ್ ಅವರ ಸೇವೆಯನ್ನು ಭಾರತ ಮಿಸ್ ಮಾಡಿಕೊಳ್ಳಲಿದೆ. ದುರಾದೃಷ್ಟವಶಾತ್ ಅವರು ತಂಡದಲ್ಲಿ ಈ ಬಾರಿ ಇಲ್ಲ. ಅವರು ಆದಷ್ಟು ಬೇಗ ಚೇತರಿಸಿಕೊಂಡು, ಮೈದಾನಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮಾರ್ಕಸ್ ಸ್ಟೋನಿಸ್ ಹೇಳಿದ್ದಾರೆ.

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್