ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿ ಫೆಬ್ರವರಿ 09ರಿಂದ ಆರಂಭನಾಗ್ಪುರ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮೂವರು ಸ್ಪಿನ್ನರ್ ಕಣಕ್ಕಿಳಿಯುವ ಸಾಧ್ಯತೆಮೊದಲ ಟೆಸ್ಟ್‌ ಪಂದ್ಯಕ್ಕೆ ನಾಗ್ಪುರ ಮೈದಾನ ಆತಿಥ್ಯ

ನಾಗ್ಪುರ(ಫೆ.08): ಗುರುವಾರದಿಂದ ಆರಂಭಗೊಳ್ಳಲಿರುವ ಆಸ್ಪ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಮೂವರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಇದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನಾಯಕ ಕೆ.ಎಲ್‌.ರಾಹುಲ್‌ ಈ ಬಗ್ಗೆ ಸುಳಿವು ನೀಡಿದ್ದಾರೆ. ಇಲ್ಲಿನ ವಿಸಿಎ ಕ್ರೀಡಾಂಗಣದ ಪಿಚ್‌ ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವು ನೀಡುವ ನಿರೀಕ್ಷೆ ಇದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಬೇಕಿದ್ದರೆ ಭಾರತ ಸರಣಿ ಗೆಲ್ಲಬೇಕಿದ್ದು, ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪಿಚ್‌ಗಳನ್ನು ಸಿದ್ಧಗೊಳಿಸಲು ಕ್ಯುರೇಟರ್‌ಗಳಿಗೆ ಸೂಚಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಒಂದು ವೇಳೆ ಟೀಂ ಇಂಡಿಯಾ (Team India) ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದರೆ, ರವಿಚಂದ್ರನ್ ಅಶ್ವಿನ್‌ (Ravichandran Ashwin) ಹಾಗೂ ರವೀಂದ್ರ ಜಡೇಜಾ (Ravindra Jadeja) ಜತೆಗೆ ಕುಲ್ದೀಪ್ ಯಾದವ್ ಇಲ್ಲವೇ ಅಕ್ಷರ್ ಪಟೇಲ್‌ (Axar Patel) ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾದಲ್ಲಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಇಲ್ಲವೇ ಜಯದೇವ್ ಉನಾದ್ಕತ್‌ ವೇಗಿಗಳ ರೂಪದಲ್ಲಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಗ್ರೀನ್‌ ಔಟ್‌: ಇದೇ ವೇಳೆ ಮೊದಲ ಟೆಸ್ಟ್‌ಗೂ ಮುನ್ನ ಆಸ್ಪ್ರೇಲಿಯಾಗೆ ಮತ್ತೊಂದು ಆಘಾತ ಎದುರಾಗಿದ್ದು, ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ ನಾಗ್ಪುರ ಪಂದ್ಯದಿಂದ ಹೊರಬಿದ್ದಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಟೀವ್‌ ಸ್ಮಿತ್‌ ಈ ವಿಷಯನ್ನು ಖಚಿತಪಡಿಸಿದ್ದಾರೆ. ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್‌ ನಂತರ ಗ್ರೀನ್‌ ಸಹ ಹೊರಬಿದ್ದಿರುವುದು ಆಸೀಸ್‌ಗೆ ಹಿನ್ನಡೆ ಉಂಟಾಗಿದೆ.

ಅತಿಯಾದ ಪ್ರಯೋಗ ಬೇಡ: ಅಶ್ವಿ​ನ್‌ಗೆ ಶಾಸ್ತ್ರಿ

ನವ​ದೆ​ಹ​ಲಿ: ಆರ್‌.​ಅ​ಶ್ವಿನ್‌ ಭಾರ​ತದ ಪ್ರಮುಖ ಆಟ​ಗಾರ. ಅವ​ರ ಪ್ರದರ್ಶನವೇ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಫಲಿತಾಂಶ ನಿರ್ಧರಿಸಲಿದೆ ಎಂದು ಟೀಂ ಇಂಡಿ​ಯಾ ಮಾಜಿ ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯಿಸಿದ್ದಾರೆ. ಭಾರತ ಹಾಗೂ ಆಸ್ಪ್ರೇಲಿಯಾ ಸರಣಿ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಸ್ತ್ರಿ, ಅಶ್ವಿನ್‌ಗೆ ಸಲಹೆಯೊಂದನ್ನೂ ನೀಡಿದ್ದಾರೆ. ‘ಅ​ಶ್ವಿನ್‌ ಅತಿಯಾದ ಪ್ರಯೋಗಕ್ಕೆ ಮುಂದಾಗಬಾರದು. ಅವರ ಸಾಮಾನ್ಯ ಆಟವೇ ತಂಡಕ್ಕೆ ಸಾಕು’ ಎಂದಿ​ದ್ದಾರೆ. ಅಶ್ವಿನ್‌ ಆಸ್ಪ್ರೇಲಿಯಾ ವಿರುದ್ಧ ಭಾರತದಲ್ಲಿ ಕೇವಲ 8 ಟೆಸ್ಟ್‌ಗಳಲ್ಲಿ 50 ವಿಕೆಟ್‌ ಕಿತ್ತಿದ್ದಾರೆ.

Border Gavaskar Trophy ಆಸೀಸ್‌ ಸ್ಪಿನ್‌ ಚಾಲೆಂಜ್‌ಗೆ ಭಾರತ ಭರ್ಜರಿ ತಯಾರಿ..!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.