ನವದೆಹಲಿ[ನ.12]: ಭಾರತ ಕ್ರಿಕೆಟ್ ತಂಡದ 1983ರ ಏಕದಿನ ವಿಶ್ವಕಪ್ ಗೆಲುವಿನ ಬಗ್ಗೆ ಬಾಲಿವುಡ್‌ನಲ್ಲಿ ಸಿನಿಮಾ ಆಗುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರವನ್ನು ನಟ ರಣ್‌ವೀರ್ ಸಿಂಗ್ ನಿರ್ವಹಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ಕಪಿಲ್‌ರ ಜನ ಪ್ರಿಯ ‘ನಟರಾಜ ಶಾಟ್’ ಅನುಕರಣೆ ಮಾಡಿರುವ ರಣ್‌ವೀರ್, ಅದರ ಫೋಟೋವನ್ನು ಸೋಮವಾರ ಸಾಮಾಜಿಕ ತಾಣಗಳಲ್ಲಿ ಹಾಕಿದ್ದಾರೆ. ಆ ಫೋಟೋ ವೈರಲ್ ಆಗಿದೆ.

1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್!

ಕಪಿಲ್‌ರ ಬ್ಯಾಟಿಂಗ್ ಶೈಲಿ ಮಾತ್ರವಲ್ಲದೆ ಹಾವ-ಭಾವವನ್ನು ರಣ್‌ವೀರ್ ಅಚ್ಚುಕಟ್ಟಾಗಿ ಅನುಕರಿಸಿದ್ದಾರೆ. ಕಪಿಲ್‌ರ ಮುಖ ಚಹರೆಗೆ ಹೋಲುವಂತೆಯೇ ರಣ್‌ವೀರ್‌ಗೆ ಮೇಕಪ್ ಮಾಡಲಾಗಿದೆ. ಸ್ವತಃ ಕಪಿಲ್ ದೇವ್, ಟ್ವೀಟರ್‌ನಲ್ಲಿ ರಣ್ ವೀರ್‌ಗೆ ‘ಹ್ಯಾಟ್ಸ್ ಆಫ್’ ಹೇಳಿದ್ದಾರೆ.

ರಣವೀರ್‌ ಸಿಂಗ್ ಬರ್ತಡೇ ದಿನ ‘83’ ಸಿನಿಮಾ ಫಸ್ಟ್ ಲುಕ್ ರಿಲೀಸ್

ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಕೆಚ್ಚೆದೆಯ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆ ಪಂದ್ಯದಲ್ಲಿ ಕಪಿಲ್ ನಟರಾಜ ಶಾಟ್ ಬಾರಿಸಿದ್ದರು. ಚಿತ್ರದ ನಿರ್ದೇಶಕ ಕಬೀರ್ ಖಾನ್ ಇನ್ ಸ್ಟಾಗ್ರಾಂನಲ್ಲಿ ಆ ಚಿತ್ರವನ್ನು ಹಂಚಿಕೊಂಡಿದ್ದು, ಆ ಪಂದ್ಯ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಆ ವಿಶ್ವದಾಖಲೆಯ ಇನಿಂಗ್ಸ್ ಭಾರತೀಯರು ಇಂದಿಗೂ ನೋಡಿಲ್ಲ. ಇತಿಹಾಸ ನಿರ್ಮಾಣವಾದ ಆ ಅದ್ಭುತ ಕ್ಷಣವನ್ನು ಪರದೆಯ ಮೇಲೆ ಏಪ್ರಿಲ್’ನಲ್ಲಿ ಇಡೀ ಜಗತ್ತೇ ನೋಡಲಿದೆ ಎಂದು ಬರೆದುಕೊಂಡಿದ್ದಾರೆ.

ರಣ್‌ವೀರ್ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಲಿದ್ದು, ದೀಪಿಕಾ ಪಡುಕೋಣೆ, ಶಕೀಬ್ ಸಲೀಂ, ಬೋಮನ್ ಇರಾನಿ ಮುಂತಾದ ಬಹುತಾರಾಗಣದ ಚಿತ್ರ ಇದಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಹಾಗೂ ಸಿನೆಮಾ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.