ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಬಳಿ ಮ್ಯಾಜಿಕ್ ಬ್ಯಾಟ್..! ವಿಡಿಯೋ ವೈರಲ್
* ಲಾರ್ಡ್ಸ್ ಟೆಸ್ಟ್ ವೇಳೆ ಜೋ ರೂಟ್ ಅವರ ಮ್ಯಾಜಿಕ್ ಬ್ಯಾಟ್ ವಿಡಿಯೋ ವೈರಲ್
* ಲಾರ್ಡ್ಸ್ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್
* ಶತಕ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಜೋ ರೂಟ್
ಲಂಡನ್(ಜೂ.07): ಮಾಜಿ ನಾಯಕ ಜೋ ರೂಟ್, ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಲಾರ್ಡ್ಸ್ ಟೆಸ್ಟ್ (Lords Test) ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನ್ಯೂಜಿಲೆಂಡ್ ಎದುರಿನ ಟೆಸ್ಟ್ ಪಂದ್ಯದ ವೇಳೆಯಲ್ಲೇ ಜೋ ರೂಟ್ 10 ಸಾವಿರ ಟೆಸ್ಟ್ ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಎರಡನೇ ಹಾಗೂ ಒಟ್ಟಾರೆ 14ನೇ ಬ್ಯಾಟರ್ ಎನ್ನುವ ಶ್ರೇಯಕ್ಕೆ ಜೋ ರೂಟ್ ಪಾತ್ರರಾಗಿದ್ದರು. ಇದೆಲ್ಲದರಾಚೆ ಜೋ ರೂಟ್ (Joe Root) ಕೈಯಲ್ಲಿದ್ದ ಮ್ಯಾಜಿಕ್ ಬ್ಯಾಟ್ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಲಾರಂಭಿಸಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದದಲ್ಲಿ ನ್ಯೂಜಿಲೆಂಡ್ ನೀಳಕಾಯದ ವೇಗಿ ಕೈಲ್ ಜೇಮಿಸನ್ ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್‌ನಲ್ಲಿದ್ದ ಜೋ ರೂಟ್ ಅವರು ತಮ್ಮ ಬ್ಯಾಟನ್ನು ಕೈಯಲ್ಲಿ ಹಿಡಿದುಕೊಳ್ಳದೇ ನೇರವಾಗಿ ನಿಲ್ಲುವಂತೆ ಮಾಡಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೆನ್ ಜೋಸೆಫ್ ಎನ್ನುವವರು, ಜೋ ರೂಟ್ ಪ್ರತಿಭಾನ್ವಿತ ಆಟಗಾರ ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೆ ಈ ರೀತಿ ಮ್ಯಾಜಿಕ್ ಮಾಡಬಲ್ಲರು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಏನಿದು ವಾಮಾಚಾರವೇ? ಎಂದು ಪ್ರಶ್ನಿಸಿದ್ದಾರೆ.
ಟೆಸ್ಟ್‌ನಲ್ಲಿ 10,000 ರನ್: ರೂಟ್ ಅತಿ ಕಿರಿಯ ಬ್ಯಾಟರ್
ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್ ಪೂರ್ತಿಗೊಳಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿ 10 ಸಾವಿರ ರನ್ ಮೈಲಿಗಲ್ಲು ತಲುಪುವಾಗ ರೂಟ್ ವಯಸ್ಸು 31 ವರ್ಷ 157 ದಿನಗಳು. ಇದಕ್ಕೂ ಮೊದಲು ಇಂಗ್ಲೆಂಡ್ ಮಾಜಿ ನಾಯಕ ಅಲೇಸ್ಟರ್ ಕುಕ್ ಕೂಡಾ ಇಷ್ಟೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.
ಟೆಸ್ಟ್‌ನಲ್ಲಿ 10,000 ರನ್: ಜೋ ರೂಟ್ ಅತಿ ಕಿರಿಯ ಬ್ಯಾಟರ್
ರೂಟ್ ಈ ಮೈಲಿಗಲ್ಲು ತಲುಪಲು 218 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ. ವೇಗವಾಗಿ 10 ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆ ಬ್ರಿಯಾನ್ ಲಾರಾ, ಸಚಿನ್ ತೆಂಡುಲ್ಕರ್, ಸಂಗಕ್ಕರ ಹೆಸರಲ್ಲಿದೆ. ಈ ಮೂವರು ಕೇವಲ 195 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಮೊದಲ ಟೆಸ್ಟ್: ಕಿವೀಸ್ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ
ಲಂಡನ್: ಭಾರೀ ರೋಚಕತೆ ಸೃಷ್ಟಿಸಿದ್ದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 5 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲುವಿಗೆ 277 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಭಾನುವಾರ 5 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 216 ರನ್ ಗಳಿಸಿದ್ದ ಇಂಗ್ಲೆಂಡ್ ಭಾನುವಾರ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗುರಿ ತಲುಪಿತು.
ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಜೋ ರೂಟ್ ಔಟಾಗದೆ 115 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೈಲ್ ಜೇಮಿಸನ್ 4 ವಿಕೆಟ್ ಕಿತ್ತರು. ಇದಕ್ಕೂ ಮೊದಲು ಪ್ರಥಮ ಇನ್ನಿಂಗ್ಸ್‌ನಲ್ಲಿ 132 ರನ್‌ಗೆ ಆಲೌಟಾಗಿದ್ದ ಕಿವೀಸ್, ಇಂಗ್ಲೆಂಡನ್ನು 141ಕ್ಕೆ ನಿಯಂತ್ರಿಸಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 285 ರನ್ ಕಲೆ ಹಾಕಿತ್ತು.