ಬಿಸಿಸಿಐ ಕಡೆಗಣಿಸಿದ್ದ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಇದೀಗ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಭುವನೇಶ್ವರ್ ನಾಯಕತ್ವದ ಈ ಬಲಿಷ್ಠ ತಂಡದಲ್ಲಿ ಐಪಿಎಲ್ ತಾರೆಯರಿದ್ದು, ಆರು ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
Bhuvneshwar Kumar to Captain India at Hong Kong Sixes : ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದರೂ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸುತ್ತಲೇ ಬಂದಿದೆ. ಇದೀಗ ಕೊನೆಗೂ ಭುವಿ ಹಾಗೂ ಕೃನಾಲ್ ಪಾಂಡ್ಯ ಭಾರತ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದು ಸೀನಿಯರ್ಸ್ ತಂಡವಲ್ಲ.
ಹೌದು, ಮುಂಬರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅನುಭವಿ ಪೇಸರ್ ಭುವನೇಶ್ವರ್ ಕುಮಾರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿ ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯಲಿದೆ. ಐಪಿಎಲ್‌ನಲ್ಲಿ ಮಿಂಚಿದ ಪ್ರಮುಖ ಆಟಗಾರರು ಭಾರತ ತಂಡದಲ್ಲಿದ್ದಾರೆ. ಭುವನೇಶ್ವರ್ ಕುಮಾರ್ ಜೊತೆಗೆ ಕೃನಾಲ್ ಪಾಂಡ್ಯ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ಟಿ ನಟರಾಜನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಶಾಂಕ್ ಸಿಂಗ್ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಈಗಾಗಲೇ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ.
ಬಲಿಷ್ಠ ತಂಡ ಕಣಕ್ಕಿಳಿಸಿದ ಭಾರತ
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ. ತಂಡದಲ್ಲಿ ಅಪಾರ ಅನುಭವ, ಸ್ಫೋಟಕ ಬ್ಯಾಟಿಂಗ್, ಆಲ್ ರೌಂಡರ್ಸ್ ಹಾಗೂ ಸ್ಪೆಷಲಿಸ್ಟ್ ಬೌಲರ್‌ಗಳಿದ್ದಾರೆ. ಕೇವಲ ಆರು ಮಂದಿ ಆಡುವ ಈ ಟೂರ್ನಿ, ಕ್ರಿಕೆಟ್‌ನ ಅತ್ಯಂತ ವೇಗದ ಹಾಗೂ ರೋಚಕ ಫಾರ್ಮ್ಯಾಟ್‌ಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅಪಾರ ಅನುಭವ ಹೊಂದಿರುವ ಭುವನೇಶ್ವರ್ ಕುಮಾರ್ ಹೊಸ ಬಾಲ್‌ನಲ್ಲಿ ಮ್ಯಾಜಿಕ್ ಮಾಡಬಲ್ಲರು.
ಆಲ್ ರೌಂಡರ್ ಆಗಿ ಕೃನಾಲ್ ಪಾಂಡ್ಯ ತಂಡಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ. ನಿತೀಶ್ ರಾಣಾ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದರೆ, ಶಶಾಂಕ್ ಸಿಂಗ್ ಮತ್ತು ರಾಹುಲ್ ತೆವಾಟಿಯಾ ಫಿನಿಶರ್ಸ್ ರೋಲ್ ನಿಭಾಯಿಸಲಿದ್ದಾರೆ. ರಾಹುಲ್ ತ್ರಿಪಾಠಿ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದರೆ, ಟಿ ನಟರಾಜನ್ ಎಡಗೈ ಪೇಸ್ ಬೌಲಿಂಗ್ ಸ್ಪೆಷಲಿಸ್ಟ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ವರ್ಷದ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಡಿಎಲ್ಎಸ್ ನಿಯಮದಡಿ 2 ರನ್‌ಗಳ ಜಯದೊಂದಿಗೆ ಭಾರತ ಶುಭಾರಂಭ ಮಾಡಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈ ವರ್ಷ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಪಾಕಿಸ್ತಾನ ಕಳೆದ ಫೈನಲ್‌ನಲ್ಲಿ ಕುವೈತ್ ತಂಡವನ್ನು ಮಣಿಸಿ 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 8 ಪ್ರಮುಖ ಕ್ರಿಕೆಟ್ ರಾಷ್ಟ್ರಗಳು ಹಾಗೂ 4 ಅಸೋಸಿಯೇಟ್ ಸದಸ್ಯ ರಾಷ್ಟ್ರಗಳು ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್‌ನಲ್ಲಿ ನಡೆಯುವ ಈ ಮೂರು ದಿನಗಳ ಟೂರ್ನಿಯಲ್ಲಿ ಸೆಣಸಾಡಲಿವೆ. ಈ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಪಾಕ್‌ಗೆ ಶುರುವಾಯ್ತು ನಡುಕ:
ಪಾಕಿಸ್ತಾನ ತಂಡವು ಈ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಟೂರ್ನಿಯಲ್ಲಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದ್ದು, ಬರೋಬ್ಬರಿ ಆರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಈ ಬಾರಿ ಪಾಕಿಸ್ತಾನದ ಸೊಕ್ಕನ್ನು ಮುರಿಯಲು ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದೆ. ಅದರಲ್ಲೂ ಪಾಕ್ ಎದುರು ಭುವಿ ಎಷ್ಟು ಅಪಾಯಕಾರಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

