ಆರ್‌ಸಿಬಿ ಗೆಲುವಿನಿಂದ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಪಟಾಕಿ ಸಿಡಿಯುತ್ತಿದೆ. ಮೆರವಣಿಗೆ ನಡೆಯುತ್ತಿದೆ. ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲಿ ನೋಡಿದರೂ ಸಂಭ್ರಮಾಚರಣೆ, ಆರ್‌ಸಿಬಿ, ಆರ್‌ಸಿಬಿ ಕೂಗು ಕೇಳಿಸುತ್ತಿದೆ.

ಬೆಂಗಳೂರು(ಜೂ.04) ಕಳೆದ 18 ವರ್ಷದಿಂದ ಬೆಂಗಳೂರು ತಂಡವನ್ನು ಬೆಂಬಲಿಸುತ್ತಿದ್ದಾರೆ. ಸೋಲಿನಲ್ಲಿ ಜೊತೆಗೆ ನಿಂತಿದ್ದಾರೆ. ಗೆಲುವನ್ನು ಸಂಭ್ರಮಿಸಿದ್ದಾರೆ. ಇನ್ನೂ ಕಪ್ ಗೆದ್ದಿಲ್ಲ, ಮುಂದಿನ ಸಲ, ಟ್ರೋಫಿ ಗೆಲ್ಲದ ತಂಡ ಅನ್ನೋ ಕುಹಕ ಮಾತುಗಳು ಟ್ರೋಲ್‌ಗಳನ್ನು ಅಭಿಮಾನಿಗಳು ಸಹಿಸಿಕೊಂಡಿದ್ದಾರೆ. ತಾಳ್ಮೆಯಿಂದ ಕಾದಿದ್ದಾರೆ. ಇದೀಗ 18ನೇ ವರ್ಷದಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿದೆ. ಇನ್ನು ಸಂಭ್ರಮ ಮುಗಿಲು ಮುಟ್ಟದೇ ಇರುತ್ತಾ? ಆರ್‌ಸಿಬಿ ಹಬ್ಬದಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಮರವಣಿಗೆ ನಡೆಯುತ್ತಿದೆ. ಪಟಾಕಿ ಸಿಡಿಯುತ್ತಿದೆ. ಬೆಂಗಳೂರು ಇವತ್ತು ನಿದ್ದೆ ಮಾಡುವುದಿಲ್ಲ. ಇಡೀ ದಿನ ಸಂಭ್ರಮಾಚರಣೆ ಜೋಶ್ ತುಂಬಿದೆ.

ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಆರ್‌ಸಿಬಿ 6 ರನ್ ಗೆಲುವು ದಾಖಲಿಸಿದೆ. ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿದೆ. ಬೆಂಗಳೂರಿನ ಪ್ರತಿ ರಸ್ತೆಯಲ್ಲಿ, ಗಲ್ಲಿಯಲ್ಲಿ ಪಟಾಕಿ ಸಿಡಿಯುತ್ತಿದೆ. ಇನ್ನು ದೊಡ್ಡ ಪರದೆ ಮೇಲೆ ಐಪಿಎಲ್ ವೀಕ್ಷಿಸಿದಿ ಅಭಿಮಾನಿಗಳು ಅಲ್ಲೆ ಸಂಭ್ರಮಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಗೆಲುವು, ಚಾಂಪಿಯನ್ ಮಾತುಗಳು, ವಿಡಿಯೋ, ಪೋಸ್ಟ್‌ಗಳೇ ರಾರಾಜಿಸುತ್ತಿದೆ. ಆರ್‌ಸಿಬಿ ಅಭಿಮಾನಿಗಳು ಗೆಲುವನ್ನು ಹಬ್ಬವಾಗಿ ಆಚರಿಸುತ್ತಿದ್ದಾರೆ.

Scroll to load tweet…

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು ಆರ್‌ಸಿಬಿ ಗೆಲುವು ಸಂಭ್ರಮಿಸಿದ್ದಾರೆ. ಇಡೀ ಪಂದ್ಯ ಒಂದು ಎಸೆತ ಬಿಡದಂತೆ ವೀಕ್ಷಿಸಿದ ನಾಯಕರು ಇದೀಗ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಆರ್‌ಸಿಬಿಗೆ ಶುಭಕೋರಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಸಿದ್ದಾರಮಯ್ಯ ಹೇಳಿದ್ದಾರೆ.

ಇತ್ತ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿದ್ದಾರೆ. PL2025 ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.