ಜಂಬೋಗೂ ತಟ್ಟಿದ ಮುಷ್ಕರದ ಬಿಸಿ; ಕ್ಯಾಬ್ ಸಿಗದೇ BMTC ಬಸ್‌ನಲ್ಲಿ ಮನೆ ಸೇರಿದ ಅನಿಲ್ ಕುಂಬ್ಳೆ
ಬೆಂಗಳೂರು ಬಂದ್‌ಗೆ ಕರೆಕೊಟ್ಟಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ
ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆಗೂ ತಟ್ಟಿದ ಬಂದ್ ಬಿಸಿ
ಬಿಎಂಟಿಸಿ ಬಸ್‌ನಲ್ಲಿ ಮನೆ ಸೇರಿದ ಸ್ಪಿನ್ ದಿಗ್ಗಜ
ಬೆಂಗಳೂರು(ಸೆ.11): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಇಂದು ಹಮ್ಮಿಕೊಂಡಿರುವ ಬೆಂಗಳೂರು ಬಂದ್ ಬಿಸಿ ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆಗೂ ತಟ್ಟಿದೆ. ಹೀಗಾಗಿ ಕ್ಯಾಬ್ ಸಿಗದೇ ಅನಿಲ್ ಕುಂಬ್ಳೆ, ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿ ಮನೆಗೆ ವಾಪಾಸ್ಸಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ ಅನಿಲ್ ಕುಂಬ್ಳೆ ಗಮನ ಸೆಳೆದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕನ್ನಡಿಗ ಅನಿಲ್ ಕುಂಬ್ಳೆ, "ಇಂದು ಏರ್‌ಪೋರ್ಟ್‌ನಿಂದ ಮನೆಗೆ ಬರಲು ಬಿಎಂಟಿಸಿ ಬಸ್ ಸೇವೆಯನ್ನು ಬಳಸಿಕೊಂಡೆ" ಎಂದು ಬರೆದುಕೊಂಡಿದ್ದಾರೆ. ಅನಿಲ್ ಕುಂಬ್ಳೆ ಅವರ ಸರಳ ನಡೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ, ರಾಜ್ಯ ರಾಜಧಾನಿಯ ಸಾರಿಗೆ ಜೀವನಾಡಿ ಎನಿಸಿಕೊಂಡಿರುವ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿ ಗಮನ ಸೆಳೆದಿದ್ದಾರೆ.
ನಮ್ಮ ಸರ್ಕಾರ ಬಂದ್ರೆ ಬೇಡಿಕೆ ಈಡೇರಿಸೋದಾಗಿ ಹೇಳಿದ್ದ ಕಾಂಗ್ರೆಸ್ ನಾಯಕರು ಉಲ್ಟಾ ಹೊಡೆದಿದ್ದಾರೆ: ಆಟೋ ಚಾಲಕರ ಆಕ್ರೋಶ
ಅನಿಲ್ ಕುಂಬ್ಳೆ ಟೀಂ ಇಂಡಿಯಾ ಪರ 132 ಟೆಸ್ಟ್ ಆಡಿದ್ದಾರೆ. ಈ ಮೂಲಕ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 35 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂಬ್ಳೆ 30.89 ರ ಸರಾಸರಿಯಲ್ಲಿ 337 ವಿಕೆಟ್ ಗಳಿಸಿದ್ದಾರೆ.
ಮುಷ್ಕರದಿಂದಾಗಿ ಶಾಲೆ-ಕಾಲೇಜು ಸೇವೆ ನೀಡುತ್ತಿರುವ ಬಸ್‌ಗಳು ಸ್ಥಗಿತಗೊಂಡಿವೆ. ಪರ ಊರು, ಇತರೆ ಜಿಲ್ಲೆಗಳಿಂದ ನಗರಕ್ಕೆ ಬರುವವರು ಕೆಎಸ್‌ಆರ್‌ಟಿಸಿ ಅಥವಾ ರೈಲಿನಲ್ಲಿ ಪ್ರಯಾಣಿಸುವುದು ಅನಿವಾರ್ಯ. ವಿಮಾನನಿಲ್ದಾಣ ಸಂಪರ್ಕಿಸುವ ಎಲ್ಲಾ ಟ್ಯಾಕ್ಸಿಗಳು ಬಹುತೇಕ ಬಂದ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಬಿಎಂಟಿಸಿಯ ವಾಯುವಜ್ರ ಬಸ್ ಅಥವಾ ದೇವನಹಳ್ಳಿ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಬರಬೇಕಿದೆ. ಇದರಿಂದ ಬಸ್‌ಗಳಲ್ಲಿ ನೂಕು ನುಗ್ಗಲಲ್ಲೇ ಸಂಚರಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಬೆಂಗಳೂರು ಬಂದ್: ವಾಹನ ಸವಾರರಿಗೆ ಸಂಚಾರಿ ಪೊಲೀಸರ ಸಲಹೆ, ಇಲ್ಲಿವೆ ಪರ್ಯಾಯ ಮಾರ್ಗಗಳು
ಏನಿರಲ್ಲ?
ವಿಮಾನನಿಲ್ದಾಣ ಸೇವೆ ನೀಡುವ ಟ್ಯಾಕ್ಸಿಗಳು ಸ್ಥಗಿತ
ಖಾಸಗಿ ಸಂಸ್ಥೆಗಳಿಗೆ ಸೇವೆ ನೀಡುವ ಖಾಸಗಿ ಬಸ್, ಕ್ಯಾಬ್‌ಗಳು ಸ್ಥಗಿತ
ಹೊರ ಜಿಲ್ಲೆಗಳಿಂದ ನಗರ ಪ್ರವೇಶಿಸುವ ವಾಹನಗಳ ತಡೆ ಸಾಧ್ಯತೆ
ಸರಕು ಸಾಗಣೆಯಲ್ಲಿ ವ್ಯತ್ಯಯ
ಏನಿರುತ್ತೆ?
ಕೆಎಸ್‌ಆರ್‌ಟಿಸಿ ಬಸ್, ಬಿಎಂಟಿಸಿ, ಮೆಟ್ರೋ, ಖಾಸಗಿ ಆ್ಯಂಬುಲೆನ್ಸ್ ಸೇವೆ, ಬೈಕ್ ಟ್ಯಾಕ್ಸಿ ಸಂಚಾರ.