ಬಿಸಿಸಿಐ ಚಾಟಿ ಬಳಿಕ ಮತ್ತೆ ದೇಸಿ ಕ್ರಿಕೆಟ್‌ನತ್ತ ಸ್ಟಾರ್ ಆಟಗಾರರು: ರಿಷಭ್ ಕಣಕ್ಕೆ, ರೋಹಿತ್, ಕೊಹ್ಲಿ ಡೌಟ್!
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ರಣಜಿ ಕ್ರಿಕೆಟ್‌ಗೆ ಮರಳಲು ಬಿಸಿಸಿಐ ಸೂಚಿಸಿದೆ. ರೋಹಿತ್ ಶರ್ಮಾ ಮುಂಬೈ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಮತ್ತು ಪಂತ್ ಡೆಲ್ಲಿ ತಂಡದ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.
ನವದೆಹಲಿ: ರಾಷ್ಟ್ರೀಯ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮತ್ತೆ ದೇಸಿ ಕ್ರಿಕೆಟ್ ಆಡಿ ಬನ್ನಿ ಎಂದು ಬಿಸಿಸಿಐ ಆದೇಶಕ್ಕೆ ಓಗೊಟ್ಟು ತಾರಾ ಕ್ರಿಕೆಟಿಗರು ರಣಜಿ ಕಡೆ ಮುಖ ಮಾಡುತ್ತಿದ್ದಾರೆ.
ಬುಧವಾರ ರೋಹಿತ್ ಶರ್ಮಾ ಮುಂಬೈ ರಣಜಿ ತಂಡದ ಜೊತೆ ಅಭ್ಯಾಸ ಆರಂಭಿಸಿದರು. ಮುಂಬೈನಲ್ಲಿ ನಡೆದ ಬೆಳಗ್ಗಿನ ಅಭ್ಯಾಸ ಶಿಬಿರದಲ್ಲಿ ಅವರು ಪಾಲ್ಗೊಂಡು, ಕೆಲ ಕಾಲ ಬ್ಯಾಟ್ ಬೀಸಿದರು. ಮುಂಬೈ ತಂಡ ಜ.23ರಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ರಣಜಿ ಪಂದ್ಯ ಆಡಲಿದೆ. ಆದರೆ ಈ ಪಂದ್ಯಕ್ಕೆ ರೋಹಿತ್ ಲಭ್ಯವಿದ್ದಾರೊ ಎಂಬುದು ಇನ್ನು ಖಚಿತಗೊಂಡಿಲ್ಲ.
ವಿಜಯ್ ಹಜಾರೆ ಟ್ರೋಫಿ: ಇಂದು ಕರ್ನಾಟಕ vs ಹರ್‍ಯಾಣ ಸೆಮೀಸ್ ಕದನ
ಮತ್ತೆ ರಣಜಿ ಆಡ್ತಾರಾ ವಿರಾಟ್?
ಜ.23ರಿಂದ ಆರಂಭಗೊಳ್ಳಲಿರುವ ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯಕ್ಕೆ ಬುಧವಾರ ಡೆಲ್ಲಿ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಯಿತು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಕೂಡಾ ಇದ್ದಾರೆ. ರಿಷಭ್ ಆಡುವುದು ಖಚಿತವಾಗಿದ್ದರೂ, ಕೊಹ್ಲಿ ಲಭ್ಯತೆ ಬಗ್ಗೆ ಸಂದೇಹವಿದೆ. ಕೊಹ್ಲಿ ಕೊನೆ ಬಾರಿ 2012ರಲ್ಲಿ ರಣಜಿ ಆಡಿದ್ದರೆ, ರಿಷಭ್ 2017ರಲ್ಲಿ ರಣಜಿಯಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಬಗ್ಗೆ ಪ್ರತಿಕ್ರಿಯಿಸಿರುವ ಡೆಲ್ಲಿ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಶೋಕ್ ಶರ್ಮಾ, ‘ಕೊಹ್ಲಿ, ರಿಷಭ್ ಡೆಲ್ಲಿ ಪರ ಕನಿಷ್ಠ ಒಂದು ಪಂದ್ಯವಾದರೂ ಆಡಬೇಕು. ಆದರೆ ಅವರು ಆಡುವ ಸಾಧ್ಯತೆಯಿಲ್ಲ’ ಎಂದಿದ್ದಾರೆ.
ಕರ್ನಾಟಕ ವಿರುದ್ಧ ಪಂದ್ಯಕ್ಕೆ ಗಿಲ್
ಕರ್ನಾಟಕ ವಿರುದ್ಧ ಜ.23ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ ರಣಜಿ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಪಂಜಾಬ್ ಪರ ಆಡುವ ಸಾಧ್ಯತೆಯಿದೆ. ತಮ್ಮ ಲಭ್ಯತೆ ಬಗ್ಗೆ ಈಗಾಗಲೇ ಅವರು ಪಂಜಾಬ್ ಕ್ರಿಕೆಟ್ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇನ್ನು, ಯಶಸ್ವಿ ಜೈಸ್ವಾಲ್ ಕೂಡಾ ರಣಜಿಗೆ ಮರಳುತ್ತಿದ್ದು, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯದಲ್ಲಿ ಮುಂಬೈ ತಂಡದ ಆಯ್ಕೆ ಲಭ್ಯವಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್; ಸ್ಟಾರ್ ಆಟಗಾರ ಆಡೋದೇ ಡೌಟ್!
ರಣಜಿ ಶಿಬಿರ ತೊರೆದು ಐಪಿಎಲ್‌ನ ತರಬೇತಿಗೆ ಹೋದ ಅನುಜ್‌ಗೆ ಸಂಕಷ್ಟ
ನವದೆಹಲಿ: ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯಕ್ಕಾಗಿ ಅರುಣ್ ಜೇಟ್ಲಿ ಮೈದಾನದಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದರೂ ಡೆಲ್ಲಿ ತಂಡದ ಅನುಜ್ ರಾವತ್ ಸೋಮವಾರ ಸೂರತ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ತರಬೇತಿಗೆ ಹಾಜರಾಗಿದ್ದಾರೆ. ಇದು ಸದ್ಯ ಅವರಿಗೆ ಸಂಕಷ್ಟ ತಂದೊಡ್ಡಿವ ಸಾಧ್ಯತೆಯಿದೆ. ಆಟಗಾರರು ರೆಡ್ ಬಾಲ್ ಪಂದ್ಯಗಳಿಗೆ ಆದ್ಯತೆ ನೀಡಬೇಕು ಎನ್ನುವ ಬಿಸಿಸಿಐ ನಿಯಮವಿದ್ದರೂ ರಾವತ್ ಅದನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಡೆಲ್ಲಿ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಶೋಕ್ ವರ್ಮಾ. ‘ಅನುಜ್ ಡೆಲ್ಲಿ ತಂಡದ ಶಿಬಿರ ತಪ್ಪಿಸಿ ಐಪಿಎಲ್ ಅಭ್ಯಾಸಕ್ಕೆ ಹಾಜರಾಗಿರುವ ಬಗ್ಗೆ ನಮಗೆ ತಿಳಿದಿಲ್ಲ. ಅವರು ಅನುಮತಿ ಕೇಳಬೇಕಿತ್ತು. ನಮಗೆ ಇನ್ನೂ ಎರಡು ಪಂದ್ಯ ಆಡುವುದು ಬಾಕಿಯಿದೆ. ಅವರಿಗೆ ಅನುಮತಿ ಕೊಟ್ಟವರು ಯಾರೆಂದು ತಿಳಿದಿಲ್ಲ’ ಎಂದಿದ್ದಾರೆ.