ಮುಂಬೈ(ಮಾ.18): ದೇಶದೆಲ್ಲೆಡೆ ಮತ್ತೆ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಎಲ್ಲ ವಯೋಮಾನದ ದೇಶೀಯ ಕ್ರಿಕೆಟ್‌ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಕುರಿತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಪತ್ರ ಬರೆದಿದ್ದಾರೆ.

ಕೋವಿಡ್‌ ಭೀತಿ ನಡುವೆಯೂ 2021ರ ದೇಶೀಯ ಋುತುಮಾನ ಜನವರಿಯಿಂದ ಆರಂಭಗೊಂಡಿದ್ದು, ಈಗಾಗಲೇ ಬಿಸಿಸಿಐ ಸಯ್ಯದ್‌ ಮುಷ್ತಾಕ್‌ ಅಲಿ ಆಯೋಜಿಸಿತ್ತು. ಇನ್ನು ಇತ್ತೀಚೆಗಷ್ಟೇ ವಿಜಯ್‌ ಹಜಾರೆ ಟ್ರೋಫಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಇದೀಗ ವುಮನ್ಸ್‌ ಸೀನಿಯ​ರ್ಸ್ ಏಕದಿನ ಪಂದ್ಯಾವಳಿಗೆ ಚಾಲನೆ ನೀಡಲಾಗಿದ್ದು, ದೇಶದ ವಿವಿಧ ನಗರಗಳಲ್ಲಿ ಪಂದ್ಯಗಳು ನಡೆಯುತ್ತಿವೆ. ಇದರ ನಡುವೆ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.

‘ಈ ಋುತುವಿನಲ್ಲಿ ಎಲ್ಲ ವಯೋಮಾನದವರಿಗೆ ಸಾಕಷ್ಟು ಪಂದ್ಯಗಳನ್ನು ಆಯೋಜಿಸುವುದು ನಮ್ಮ ಪ್ರಯತ್ನವಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಎಲ್ಲ ವಯೋಮಾನದ ಪಂದ್ಯಾವಳಿಗಳನ್ನು ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ಶಾ ಪತ್ರದಲ್ಲಿ ವಿವರಿಸಿದ್ದಾರೆ.

ಟೀಂ ಇಂಡಿಯಾ ಮೇಲೆ ಕಿಡಿಕಾರಿದ ಗೌತಮ್ ಗಂಭೀರ್..!

ದೇಶಿ ಟೂರ್ನಿಗಳ ವೇಳೆ ಊರಿಂದ ಊರಿಗೆ ಪ್ರಯಾಣ ಮಾಡುವುದು ಅನಿವಾರ್ಯವಾಗಿರುತ್ತದೆ. ಕೋವಿಡ್‌ ಪರಿಸ್ಥಿತಿಯಲ್ಲಿ ದುಸ್ಸಾಹಕ್ಕೆ ಕೈ ಹಾಕುವುದು ಸರಿಯಲ್ಲ. ಅಲ್ಲದೇ ಬೋರ್ಡ್‌ ಪರೀಕ್ಷೆಗಳು ಆರಂಭವಾಗುತ್ತಿದ್ದು, ಆಟಗಾರರ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಳ್ಳಬೇಕಿದೆ. ಆಟಗಾರರ ಆರೋಗ್ಯ, ಸುರಕ್ಷತೆ ನಮ್ಮ ಮೊದಲ ಆದ್ಯತೆ ಆಗಿದೆ’ ಎಂದಿದ್ದಾರೆ.