* ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಗೆ ಭರದ ಸಿದ್ದತೆ* 2023ರ ಮಾರ್ಚ್‌ ತಿಂಗಳಿನಲ್ಲಿ ಬಿಸಿಸಿಐ ಮಹಿಳಾ ಐಪಿಎಲ್ ಆಯೋಜಿಸಲು ಪ್ಲಾನ್* ಮಾರ್ಚ್‌ ಮೊದಲ ವಾರದಲ್ಲಿ ಐಪಿಎಲ್‌ ನಡೆಸಲು ಉದ್ದೇಶಿಸಲಾಗಿದೆ. 

ನವದೆಹಲಿ(ಆ.13): ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ 2023ರ ಮಾರ್ಚ್‌ನಲ್ಲಿ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಫೆಬ್ರವರಿ 9ರಿಂದ 26ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದ್ದು, ಅದಾದ ಕೂಡಲೇ ಮಾರ್ಚ್‌ ಮೊದಲ ವಾರದಲ್ಲಿ ಐಪಿಎಲ್‌ ನಡೆಸಲು ಉದ್ದೇಶಿಸಲಾಗಿದೆ.

‘ಸದ್ಯಕ್ಕೆ 5 ತಂಡಗಳೊಂದಿಗೆ ಟೂರ್ನಿ ನಡೆಸಲು ಯೋಜನೆ ಸಿದ್ಧವಿದೆ. ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕಾರಣ ತಂಡಗಳ ಸಂಖ್ಯೆ ಆರಕ್ಕೇರಿಕೆಯಾಗಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರತೀ ವರ್ಷ ಮಹಿಳಾ ದೇಸಿ ಋುತು ನವೆಂಬರ್‌ನಿಂದ ಏಪ್ರಿಲ್‌ವರೆಗೆ ನಡೆಯಲಿದ್ದು, ಈ ಬಾರಿ ಅಕ್ಟೋಬರ್‌ನಲ್ಲಿ ಆರಂಭವಾಗಿ 2023ರ ಫೆಬ್ರವರಿ ವೇಳೆ ಮುಕ್ತಾಯಗೊಳ್ಳಲಿದೆ. ಮಹಿಳಾ ಐಪಿಎಲ್‌ ನಡೆಸಲೆಂದೇ ಬಿಸಿಸಿಐ ದೇಸಿ ಋುತುವಿನ ವೇಳಾಪಟ್ಟಿ ಬದಲಾಯಿಸಿದೆ ಎಂದು ತಿಳಿದುಬಂದಿದೆ.

ಮಹಾರಾಜ ಟಿ20 ಟ್ರೋಫಿ: ಗುಲ್ಬರ್ಗಾಕ್ಕೆ ಹ್ಯಾಟ್ರಿಕ್‌ ಗೆಲುವು

ಮೈಸೂರು: ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಗುಲ್ಬರ್ಗಾ ಮೈಸ್ಟಿಕ್ಸ್‌ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸತತ 2ನೇ ಪಂದ್ಯದಲ್ಲಿ 9 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ. ಶುಕ್ರವಾರ ಹುಬ್ಬಳ್ಳಿ ಟೈಗ​ರ್‍ಸ್ ವಿರುದ್ಧ ಗೆದ್ದ ತಂಡ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಜಯ ದಾಖಲಿಸಿದರೆ, ಹುಬ್ಬಳ್ಳಿ 3ನೇ ಸೋಲುಂಡಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 8 ವಿಕೆಟ್‌ ಕಳೆದುಕೊಂಡು 145 ರನ್‌ ಕಲೆ ಹಾಕಿತು. ತುಷಾರ್‌ ಸಿಂಗ್‌ 42, ಲುವ್‌ನಿತ್‌ ಸಿಸೋಡಿಯಾ 30, ನವೀನ್‌ 24 ರನ್‌ ಗಳಿಸಿದರು. ಅಭಿಲಾಶ್‌ ಶೆಟ್ಟಿ, ಮನೋಜ್‌, ರಿತೇಶ್‌ ಭಟ್ಕಳ್‌ ತಲಾ 2 ವಿಕೆಟ್‌ ಪಡೆದರು. ಸಾಧಾರಣ ಗುರಿ ಬೆನ್ನತ್ತಿದ ಮನೀಶ್‌ ಪಾಂಡೆ ನಾಯಕತ್ವದ ಗುಲ್ಬರ್ಗಾ 16.4 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ದೇವದತ್ತ ಪಡಿಕ್ಕಲ್‌ 47 ಎಸೆತಗಳಲ್ಲಿ 62 ರನ್‌ ಸಿಡಿಸಿ ಔಟಾದರೆ, ರೋಹನ್‌ ಪಾಟೀಲ್‌ 61(40 ಎಸೆತ) ರನ್‌ಗಳಿಸಿ ಅಜೇಯರಾಗಿ ಉಳಿದರು.

ಹರ್ಷಲ್ ಪಟೇಲ್‌ ಜೊತೆ ಜಸ್ಪ್ರೀತ್ ಬುಮ್ರಾ ಸಹ ಟಿ20 ವರ್ಲ್ಡ್​ಕಪ್ ಆಡಲ್ವಾ..?

ರೋಹನ್‌ ಸ್ಫೋಟಕ ಶತಕ: ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೈಸೂರು ವಾರಿಯ​ರ್‍ಸ್ ವಿರುದ್ಧ ಗುಲ್ಬರ್ಗಾ 9 ವಿಕೆಟ್‌ ಭರ್ಜರಿ ಜಯ ಸಾಧಿಸಿತು. ಮೈಸೂರು ನಿಗದಿತ 19 ಓವರಲ್ಲಿ 6 ವಿಕೆಟ್‌ಗೆ 160 ರನ್‌ ಗಳಿಸಿದರೆ, ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಲ್ಬರ್ಗಾ 14.1 ಓವರಲ್ಲಿ ಗೆಲುವು ಸಾಧಿಸಿತು. ರೋಹನ್‌ ಪಾಟೀಲ್‌ ಕೇವಲ 47 ಎಸೆತಗಳಲ್ಲಿ ಔಟಾಗದೆ 112 ರನ್‌ ಸಿಡಿಸಿದರು.

ಸ್ಕೋರ್‌:

ಹುಬ್ಬಳ್ಳಿ 20 ಓವರಲ್ಲಿ 145/8 (ತುಷಾರ್‌ 42, ಲುವ್‌ನಿತ್‌ 30, ರಿತೇಶ್‌ 2-13), 
ಗುಲ್ಬರ್ಗಾ 16.4 ಓವರಲ್ಲಿ 146/1 (ಪಡಿಕ್ಕಲ್‌ 62, ರೋಹನ್‌ 61*, ಮಿಥುನ್‌ 1-26)