10 ಟಿ20 ಪಂದ್ಯವನ್ನಾಡಿದ ಆಟಗಾರರಿಗೆ ಬಿಸಿಸಿಐನಿಂದ ಕೇಂದ್ರ ಗುತ್ತಿಗೆ.?
ಬಿಸಿಸಿಐನಿಂದ ಕೇಂದ್ರ ಗುತ್ತಿಗೆ ಪಡೆಯಬೇಕಿದ್ದರೆ ಕನಿಷ್ಠ 10 ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಬೇಕು ಎನ್ನುವ ಹೊಸ ನಿಯಮ ರೂಪಿಸಿದೆ. ಇದು ಪ್ರತಿಭಾನ್ವಿತ ಟಿ20 ಆಟಗಾರರಿಗೆ ಅನುಕೂಲವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.21): ಕನಿಷ್ಠ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಆಟಗಾರರು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಕೇಂದ್ರ ಗುತ್ತಿಗೆ ಪಡೆಯಲು ಅರ್ಹರಾಗಲಿದ್ದಾರೆ. ವಾರ್ಷಿಕ ಒಪ್ಪಂದ ನಿಯಮದಲ್ಲಿ ಬದಲಾವಣೆ ತಂದಿರುವ ಬಿಸಿಸಿಐ ಒಪ್ಪಂದಕ್ಕಾಗಿ ಆಟಗಾರರಿಗೆ ಕನಿಷ್ಠ 10 ಟಿ20 ಪಂದ್ಯಗಳ ಷರತ್ತು ವಿಧಿಸಿದೆ. ಸುಪ್ರೀಂ ನೇಮಿತ ಸಿಒಎ ಅಧಿಕಾರವಧಿಯಲ್ಲಿ ಕೆಲವೇ ಟಿ20 ಪಂದ್ಯಗಳನ್ನು ಆಡಿದ ಆಟಗಾರರಿಗೆ ಯಾವುದೇ ಕೇಂದ್ರ ಒಪ್ಪಂದಕ್ಕೆ ಪರಿಗಣಿಸಲು ನಿರಾಕರಿಸಲಾಗಿತ್ತು.
ಇದಕ್ಕೂ ಮುನ್ನ ಬಿಸಿಸಿಐ ಮಂಡಳಿ ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸುವಾಗ ಕೆಲವೊಂದು ನಿಯಮಗಳನ್ನು ಪರಿಗಣಿಸಲಾಗುತ್ತಿತ್ತು. ಅಂದರೆ, ಒಂದೇ ಒಂದು ಪಂದ್ಯವನ್ನಾಡಿದರೂ ಆ ಆಟಗಾರರನ್ನು ಒಪ್ಪಂದದ ಅಡಿಯಲ್ಲಿ ಬರುವಂತೆ ಮಾಡಲಾಗುತ್ತಿತ್ತು. ಆದರೆ ಇದನ್ನು ಸುಪ್ರೀಂ ನೇಮಿತ ಆಡಳಿತಾಧಿಕಾರಿಗಳ ಅಧಿಕಾರಾವಧಿಯಲ್ಲಿ ಕೆಲವೊಂದು ನಿಯಮಗಳನ್ನು ಮಾರ್ಪಾಡು ಮಾಡಲಾಗಿತ್ತು. ಈ ಪ್ರಕಾರ ಕನಿಷ್ಠ 3 ಟೆಸ್ಟ್ ಹಾಗೂ 7 ಏಕದಿನ ಪಂದ್ಯವನ್ನಾಡಿದ ಆಟಗಾರನಿಗೆ ಬಿಸಿಸಿಐನ ವಾರ್ಷಿಕ ಕೇಂದ್ರ ಗುತ್ತಿಗೆ ನೀಡಲಾಯಿತು.
ಆಸೀಸ್ ಎದುರಿನ ಸೀಮಿತ ಓವರ್ ಸರಣಿಯಲ್ಲಿ ಈ ಐವರು ರೋಹಿತ್ ಶರ್ಮಾ ಸ್ಥಾನ ತುಂಬಬಹುದು..!
ಹಳೆಯ ಷರತ್ತನ್ನು ಬದಲಾಯಿಸಲು ಮತ್ತು ಹೊಸ ನಿಯಮವನ್ನು ಸೇರಿಸಲು ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ, ಆಟಗಾರ ಒಂದು ವರ್ಷದಲ್ಲಿ ಕನಿಷ್ಠ 10 ಅಂತಾರಾಷ್ಟ್ರೀಯ ಟಿ20 ಅಥವಾ ಹಳೆಯ ನಿಯಮದಂತೆ 3 ಟೆಸ್ಟ್ ಹಾಗೂ 7 ಏಕದಿನ ಪಂದ್ಯವನ್ನು ಆಡಿರಬೇಕು. ಅಂತಹ ಆಟಗಾರರಿಗೆ ಕೇಂದ್ರ ಗುತ್ತಿಗೆಗೆ ಸೇರಿಸಬಹುದಾಗಿದೆ. ಈ ಹೊಸ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಟಿ20 ಸ್ಪೆಷಲಿಸ್ಟ್ ಆಟಗಾರನೊಬ್ಬ ಬಿಸಿಸಿಐನ ವಾರ್ಷಿಕ ಕೇಂದ್ರ ಗುತ್ತಿಗೆಯಿಂದ ಹೊರಗುಳಿಯಬಾರದು ಎನ್ನುವ ಉದ್ದೇಶದಿಂದ ಈ ನಿಯಮ ಜಾರಿಗೆ ತಂದಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.