ನವದೆಹಲಿ(ಜ.30): ಮುಷ್ತಾಕ್ ಅಲಿ ಟಿ20 ಟೂರ್ನಿ ಇನ್ನೇನು 2 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂದೆ ರಣಜಿ ಟ್ರೋಫಿ ಇಲ್ಲವೇ ವಿಜಯ್ ಹಜಾರೆ ಟೂರ್ನಿ ಪೈಕಿ ಯಾವುದನ್ನು ಆಯೋಜಿಸಬೇಕು ಎನ್ನುವುದರ ಬಗ್ಗೆ ಬಿಸಿಸಿಐ ಅಭಿಪ್ರಾಯ ಸಂಗ್ರಹಿಸುತ್ತಿದೆ.

ಈ ಸಂಬಂಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಕರೆಮಾಡಿ ವಿಚಾರಿಸುತ್ತಿದ್ದಾರೆ. 'ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ರಣಜಿ, ವಿಜಯ್‌ ಹಜಾರೆ ಎರಡೂ ಟೂರ್ನಿಗಳನ್ನು ನಡೆಸುವಂತೆ ಕೇಳಿಕೊಂಡಿದೆ. ಒಂದು ವೇಳೆ ಒಂದು ಟೂರ್ನಿ ನಡೆಸುವುದಾದರೆ ರಣಜಿ ನಡೆಸಿ ಎಂದು ಕೆಎಸ್‌ಸಿಎ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ ಏಷ್ಯಾನೆಟ್ ಸೋದರ ಸಂಸ್ಥೆ 'ಕನ್ನಡಪ್ರಭಕ್ಕೆ' ತಿಳಿಸಿದ್ದಾರೆ.

ಈಗಾಗಲೇ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯು ಅಚ್ಚುಕಟ್ಟಾಗಿ ನಡೆದಿದ್ದು, ಯಾವುದೇ ಗೊಂದಲಗಳು ಉಂಟಾಗಿಲ್ಲ. ಹೀಗಾಗಿ ಇದೇ ರೀತಿ ರಜಣಿ ಟೂರ್ನಿ ಹಾಗೂ ವಿಜಯ್ ಹಜಾರೆ ಟೂರ್ನಿ ಆಯೋಜಿಸುವ ಕುರಿತಂತೆ ಕೆಎಸ್‌ಸಿಎ ಸೇರಿದಂತೆ ಇತರೆ ಕ್ರಿಕೆಟ್ ಸಂಸ್ಥೆಗಳ ಸಲಹೆಯನ್ನು ಬಿಸಿಸಿಐ ಕೇಳಿದೆ.

ಮುಷ್ತಾಕ್ ಅಲಿ ಟ್ರೋಫಿ: ಫೈನಲ್‌ನಲ್ಲಿ ಪ್ರಶಸ್ತಿಗಾಗಿ ತಮಿಳುನಾಡು, ಬರೋಡಾ ಫೈಟ್
 
ಬಿಸಿಸಿಐ ಅಂಡರ್‌ 19 ರಾಷ್ಟ್ರೀಯ ಏಕದಿನ ಟೂರ್ನಿಯಾದ ವಿನೂ ಮಂಕಡ್‌ ಟ್ರೋಫಿ ಹಾಗೂ ಮಹಿಳಾ ಏಕದಿನ ಟೂರ್ನಿ ನಡೆಸಲು ಬಿಸಿಸಿಐ ಲೆಕ್ಕಾಚಾರ ಹಾಕುತ್ತಿದೆ.