ನವದೆಹಲಿ(ಜ.31): ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

32 ವರ್ಷದ ಶಾ, ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್‌ ಹಸನ್‌ ಅವರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌, ಈ ವಿಷಯವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.  ಕೊರೋನಾ ವೈರಸ್ ಹಾವಳಿಯಿಂದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ ಸಾಮಾನ್ಯ ಸಭೆ ವರ್ಚುವಲ್‌ ಆಗಿ ನಡೆಯಿತು.

ಏಷ್ಯಾ ಕಪ್‌ ಟೂರ್ನಿಯನ್ನು ಎಸಿಸಿ ಆಯೋಜಿಸಲಿದೆ. ಕೊರೋನಾ ಹಿನ್ನೆಲೆಯಲ್ಲಿ 2020ರ ಏಷ್ಯಾ ಕಪ್‌ ಆವೃತ್ತಿ 2021ರ ಜೂನ್‌ಗೆ ಮುಂದೂಡಿಕೆಯಾಗಿದ್ದು, ಶ್ರೀಲಂಕಾ ಅಥವಾ ಬಾಂಗ್ಲಾ ಆತಿಥ್ಯ ವಹಿಸುವ ಸಾಧ್ಯತೆಯಿದೆ.

IPL ಅಭಿಮಾನಿಗಳಿಗೆ ಸಿಹಿ ಸುದ್ದಿ; ಭಾರತದಲ್ಲೇ ನಡೆಯಲಿದೆ ಐಪಿಎಲ್‌..!

ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನ ಅತಿ ಕಿರಿಯ ಅಧ್ಯಕ್ಷ ಎನ್ನುವ ಗೌರವಕ್ಕೆ ಜಯ್ ಶಾ ಭಾಜನರಾಗಿದ್ದಾರೆ. ಜಯ್‌ ಶಾ ಮಾರ್ಗದರ್ಶನದಲ್ಲಿ ಏಷ್ಯನ್ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಏಷ್ಯನ್ ಕ್ರಿಕಟ್ ಕೌನ್ಸಿಲ್ ಟ್ವೀಟ್‌ ಮೂಲಕ ಶುಭಕೋರಿದೆ.