ಈ ವರ್ಷ ಭಾರತದಲ್ಲೇ ನಡೆಯುತ್ತಾ ಮಹಿಳಾ ಟಿ20 ವಿಶ್ವಕಪ್?: ಅಪ್‌ಡೇಟ್ ಕೊಟ್ಟ ಜಯ್ ಶಾ..!
2024ರ ಮಹಿಳಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿ ಅರಾಜಕತೆ ಸೃಷ್ಟಿಯಾಗಿರುವುದರಿಂದ ಭಾರತಕ್ಕೆ ಆತಿಥ್ಯ ವಹಿಸಲು ಐಸಿಸಿ ಆಫರ್ ನೀಡಿತ್ತು. ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯೆ ನೀಡಿದ್ದಾರೆ
ನವದೆಹಲಿ: ಬಾಂಗ್ಲಾದೇಶದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆಯಿರುವ ಈ ವರ್ಷದ ಮಹಿಳಾ ಟಿ20 ವಿಶ್ವಕಪ್ ಆಯೋಜಿಸುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತನ್ನ ಮುಂದಿಟ್ಟಿದ್ದ ಪ್ರಸ್ತಾವವನ್ನು ಬಿಸಿಸಿಐ ತಿರಸ್ಕರಿಸಿದೆ.
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ‘ವಿಶ್ವಕಪ್ ಆಯೋಜಿಸುವ ಬಗ್ಗೆ ಐಸಿಸಿ ನಮ್ಮಲ್ಲಿ ಕೇಳಿತ್ತು. ಆದರೆ ನಾನು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಭಾರತ ಮುಂದಿನ ವರ್ಷ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸಲಿದೆ. ಹೀಗಾಗಿ ಸತತವಾಗಿ 2 ವಿಶ್ವಕಪ್ ಆಯೋಜಿಸಲು ಸಿದ್ಧರಿಲ್ಲ’ ಎಂದಿದ್ದಾರೆ.
ಸದ್ಯ ಟಿ20 ವಿಶ್ವಕಪ್ ಆ.3ರಿಂದ 20ರ ವರೆಗೆ ಬಾಂಗ್ಲಾದೇಶದಲ್ಲಿ ನಿಗದಿಯಾಗಿದೆ. ಆದರೆ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಐಸಿಸಿ ಚಿಂತನೆ ನಡೆಸುತ್ತಿದೆ. ಸದ್ಯ ಭಾರತ ಪ್ರಸ್ತಾವವನ್ನು ತಿರಸ್ಕರಿಸಿರುವುದರಿಂದ, ಶ್ರೀಲಂಕಾ ಅಥವಾ ಯುಎಇಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಭಾರತ-ಲಂಕಾ ನಡುವೆ ಸೂಪರ್ ಓವರ್ ನಡೆಸಲು ಅಂಪೈರ್ಸ್ ಮರೆತಿದ್ದರಂತೆ! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಲೆಜೆಂಡ್ಸ್ ಟಿ20 ಲೀಗ್ ಸುದ್ದಿ ಸುಳ್ಳು ಎಂದ ಶಾ: ವರದಿ
ನವದೆಹಲಿ: ಬಿಸಿಸಿಐ ಲೆಜೆಂಡ್ಸ್ ಟಿ20 ಲೀಗ್ ಆಯೋಜಿಸಲಿದೆ ಎಂಬ ಸುದ್ದಿ ಸುಳ್ಳು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ನಿವೃತ್ತ ಕ್ರಿಕೆಟಿಗರಿಗಾಗಿ ಲೆಜೆಂಡ್ಸ್ ಟಿ20 ಲೀಗ್ ಆಯೋಜಿಸುವ ಬಗ್ಗೆ ಬಿಸಿಸಿಐಗೆ ಹಲವು ಮಾಜಿ ಆಟಗಾರರು ಮನವಿ ಸಲ್ಲಿಸಿದ್ದಾರೆ ಹಾಗೂ ಅದನ್ನು ಬಿಸಿಸಿಐ ಪರಿಗಣಿಸಿದೆ ಎಂದು ಹೇಳಲಾಗುತ್ತಿತ್ತು.
ಆದರೆ ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಜಯ್ ಶಾ, ‘ಇದು ಸುಳ್ಳು ಸುದ್ದಿ. ಲೀಗ್ ಆಯೋಜನೆ ಬಗ್ಗೆ ಯಾವುದೇ ಪ್ರಸ್ತಾವ ಬಂದಿಲ್ಲ. ಇದರ ಬಗ್ಗೆ ಯಾರೂ ಚರ್ಚಿಸಿಲ್ಲ. ಪ್ರಸ್ತಾವ ಬಂದೆ ಮುಂದೆ ತೀರ್ಮಾನ ಮಾಡುತ್ತೇವೆ’ ಎಂದಿದ್ದಾಗಿ ವರದಿಯಾಗಿದೆ.
2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ; ಕೊಹ್ಲಿ ಗತ್ತು ಒಲಿಂಪಿಕ್ಸ್‌ಗೂ ಗೊತ್ತು..!
ಇನ್ನೂ ಒಂದು ವರ್ಷಕ್ಕೆ ಎನ್‌ಸಿಎ ಮುಖ್ಯಸ್ಥರಾಗಿ ಲಕ್ಷ್ಮಣ್ ಮುಂದುವರಿಕೆ?
ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಇನ್ನೂ ಒಂದು ವರ್ಷ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಲಕ್ಷ್ಮಣ್ 2021ರಿಂದಲೂ ಎನ್‌ಸಿಎ ಮುಖ್ಯಸ್ಥರಾಗಿದ್ದು, ಅವರ ಅವಧಿ ಈ ವರ್ಷ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ. ಆದರೆ ಬಿಸಿಸಿಐ ಲಕ್ಷ್ಮಣ್‌ರ ಅವಧಿಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ, ಲಕ್ಷ್ಮಣ್ ಐಪಿಎಲ್ ತಂಡವೊಂದಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಅವರು ಎನ್‌ಸಿಎಯಲ್ಲೇ ಮುಂದುವರಿಯುವ ಸಾಧ್ಯತೆ ಹೆಚ್ಚು.