ಟೀಂ ಇಂಡಿಯಾಗೆ ಆಯ್ಕೆಗೆ ಯೋ-ಯೋ ಟೆಸ್ಟ್ ಕಡ್ಡಾಯ..!
ಭಾನುವಾರ ನಡೆದ ಟಿ20 ವಿಶ್ವಕಪ್ ಪರಾಮರ್ಶೆ ಸಭೆ
ಯೋ-ಯೋ ಟೆಸ್ಟ್ ಜೊತೆ ಹೊಸದಾಗಿ ಡೆಕ್ಸಾ ಪರೀಕ್ಷೆಯಲ್ಲೂ ಪಾಸಾಗುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ.
ಪರಾಮರ್ಶೆ ಸಭೆಯಲ್ಲಿ ಫಿಟ್ನೆಸ್ ಪರೀಕ್ಷೆ ಸೇರಿ ಇನ್ನೂ ಕೆಲ ಪ್ರಮುಖ ನಿರ್ಧಾರ
ಮುಂಬೈ(ಜ.02): ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಬೇಕು ಅಂದರೆ ಆಟಗಾರರು ಯೋ-ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಪಾಸಾಗಬೇಕಿದೆ. 2016ರಿಂದ ಜಾರಿಯಲ್ಲಿದ್ದ ಈ ಪರೀಕ್ಷೆಯನ್ನು ಕೋವಿಡ್ ಬಳಿಕ ಕೈಬಿಡಲಾಗಿತ್ತು. ಆದರೆ ಅನೇಕ ಆಟಗಾರರು ಪದೇಪದೇ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಜುಗರಕ್ಕೆ ಒಳಗಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ), ಯೋ-ಯೋ ಫಿಟ್ನೆಸ್ ಪರೀಕ್ಷೆಯನ್ನು ಮರುಪರಿಚಯಿಸುವಂತೆ ಬಿಸಿಸಿಐಗೆ ಶಿಫಾರಸು ಮಾಡಿತ್ತು ಎನ್ನಲಾಗಿದೆ.
ಭಾನುವಾರ ನಡೆದ ಟಿ20 ವಿಶ್ವಕಪ್ ಪರಾಮರ್ಶೆ ಸಭೆಯಲ್ಲಿ ಫಿಟ್ನೆಸ್ ಪರೀಕ್ಷೆ ಸೇರಿ ಇನ್ನೂ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ‍್ಯದರ್ಶಿ ಜಯ್ ಶಾ, ಭಾರತ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ಎನ್‌ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್, ಹಿಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಪಾಲ್ಗೊಂಡಿದ್ದರು.
ಜಸ್‌ಪ್ರೀತ್ ಬುಮ್ರಾ, ದೀಪಕ್ ಚಹರ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್ ಸೇರಿ ಅನೇಕ ಆಟಗಾರರು ಗಾಯಗೊಂಡು ಹಲವು ತಿಂಗಳು ಕಾಲ ತಂಡದಿಂದ ಹೊರಗಿರುವ ಕಾರಣ, ಆಟಗಾರರು ಸಂಪೂರ್ಣ ಫಿಟ್ನೆಸ್ ಸಾಧಿಸದೆ ತಂಡಕ್ಕೆ ಮರಳಬಾರದು ಎನ್ನುವ ಉದ್ದೇಶದಿಂದ ಬಿಸಿಸಿಐ ಯೋ-ಯೋ ಟೆಸ್ಟ್ ಅನ್ನು ಪುನಃ ಕಡ್ಡಾಯಗೊಳಿಸಿದೆ.
ಡೆಕ್ಸಾ ಪರೀಕ್ಷೆಯೂ ಕಡ್ಡಾಯ!
ಯೋ-ಯೋ ಟೆಸ್ಟ್ ಜೊತೆ ಹೊಸದಾಗಿ ಡೆಕ್ಸಾ ಪರೀಕ್ಷೆಯಲ್ಲೂ ಪಾಸಾಗುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಆಟಗಾರರ ಮೂಳೆ ಸ್ಕ್ಯಾನ್ ನಡೆಸಲಾಗುತ್ತದೆ. ಜೊತೆಗೆ ದೇಹದಲ್ಲಿರುವ ಕೊಬ್ಬಿನಂಶದ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಈ ಪರೀಕ್ಷೆಯ ಮೂಲಕ ಆಟಗಾರ ಗಾಯಗೊಳ್ಳುವ ಸಾಧ್ಯತೆಯ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಏಕದಿನ ವಿಶ್ವಕಪ್‌ಗೆ 20 ಸಂಭವನೀಯರು
ಈ ವರ್ಷ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ 20 ಸಂಭವನೀಯ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿರುವುದಾಗಿ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ. ಈ ಆಟಗಾರರಿಗೆ ಮುಂಬರುವ ಸರಣಿಗಳಲ್ಲಿ ಸರದಿ ಆಧಾರದಲ್ಲಿ ಅವಕಾಶಗಳನ್ನು ನೀಡಲಾಗುತ್ತದೆ. ಸಂಭವನೀಯರನ್ನು ಹೊರತುಪಡಿಸಿ ದೇಸಿ ಟೂರ್ನಿಗಳಲ್ಲಿ ಅಸಾಧಾರಣ ಪ್ರದರ್ಶನ ತೋರುವ ಆಟಗಾರರನ್ನೂ ವಿಶ್ವಕಪ್ ತಂಡಕ್ಕೆ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಶಾ ಹೇಳಿದ್ದಾರೆ.
2023 ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ 20 ಸಂಭಾವ್ಯ ಆಟಗಾರರ ಹೆಸರು ಫೈನಲ್..!
ದೇಸಿ ಟೂರ್ನಿಗಳನ್ನು ಆಡಿ: ಯುವಕರಿಗೆ ಬಿಸಿಸಿಐ ತಾಕೀತು!
ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿರುವ ಉದಯೋನ್ಮುಖ ಆಟಗಾರರು ದೇಸಿ ಟೂರ್ನಿಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಬಿಸಿಸಿಐ ತಾಕೀತು ಮಾಡಿದೆ. ಆ ಮೂಲಕ ಕೇವಲ ಐಪಿಎಲ್ ಪ್ರದರ್ಶನವಷ್ಟೇ ತಂಡದ ಆಯ್ಕೆಗೆ ಮಾನದಂಡವಲ್ಲ ಎಂದು ಸ್ಪಷ್ಪಪಡಿಸಿದೆ. 2022-23ರ ಋುತುವಿನ ದೇಸಿ ಏಕದಿನ, ಟಿ20 ಟೂರ್ನಿಗಳು ಮುಕ್ತಾಯಗೊಂಡ ಬಳಿಕ ಬಿಸಿಸಿಐ ಈ ನಿರ್ಧಾರ ಕೈಗೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಐಪಿಎಲ್: ಕೆಲಸದ ಒತ್ತಡದ ಮೇಲೆ ನಿಗಾ
ಐಪಿಎಲ್ ಟೂರ್ನಿ ವೇಳೆ ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರ ಕೆಲಸದ ಒತ್ತಡದ ಮೇಲೆ ಬಿಸಿಸಿಐ ನಿಗಾ ವಹಿಸಲಿದೆ ಎಂದು ಶಾ ಹೇಳಿದ್ದಾರೆ. ಫ್ರಾಂಚೈಸಿಗಳ ಜೊತೆ ಎನ್‌ಸಿಎ ಟ್ರೈನರ್‌ಗಳು ಸಂಪರ್ಕದಲ್ಲಿರಲಿದ್ದಾರೆ. ಪ್ರತಿ ಆಟಗಾರ ನೆಟ್ಸ್‌ನಲ್ಲಿ ಎಷ್ಟುಸಮಯ ಅಭ್ಯಾಸ ನಡೆಸುತ್ತಾನೆ, ಜಿಮ್ ಸೇರಿ ಎಷ್ಟುಸಮಯ ಫಿಟ್ನೆಸ್ ಅಭ್ಯಾಸ ಮಾಡುತ್ತಾನೆ, ಪಂದ್ಯದಲ್ಲಿ ಎಷ್ಟುಜವಾಬ್ದಾರಿ ನಿರ್ವಹಿಸಲಿದ್ದಾನೆ ಎನ್ನುವ ಮಾಹಿತಿಯನ್ನು ಫ್ರಾಂಚೈಸಿಗಳು ಎನ್‌ಸಿಎ ಜೊತೆ ಹಂಚಿಕೊಳ್ಳಬೇಕಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಪಾಲ್ಗೊಂಡ ಚೇತನ್ ಶರ್ಮಾ: ಅಚ್ಚರಿ!
ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿತ್ತು. ಆದರೆ ಭಾನುವಾರ ನಡೆದ ಪರಾಮರ್ಶೆ ಸಭೆಯಲ್ಲಿ ಚೇತನ್ ಪಾಲ್ಗೊಂಡಿದ್ದರು. ಅಲ್ಲದೇ ಅವರು ಕೆಲ ಪ್ರಮುಖ ಆಟಗಾರರ ಆಟದ ವೈಖರಿ ಬಗ್ಗೆ ಅಸಮಾಧಾನ ಸಹ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಚೇತನ್ ಆಯ್ಕೆ ಸಮಿತಿಗೆ ಮರು ನೇಮಕ ಬಯಸಿ ಅರ್ಜಿ ಸಲ್ಲಿಸಿದ್ದು, ಹಿಂದಿನ ಸಮಿತಿಯಲ್ಲಿದ್ದ ಹವೀರ್‍ಂದರ್ ಸಿಂಗ್ ಸಹ ಪುನಃ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಸೂಚನೆ ಮೇರೆಗೆ ಈ ಇಬ್ಬರು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.