ವಿಶ್ವಕಪ್ ಸೋಲಿಗೆ ರೋಹಿತ್ ಶರ್ಮಾ- ದ್ರಾವಿಡ್ ವಿಚಾರಣೆ; ಅಸಮಧಾನ ತೋಡಿಕೊಂಡ ಕೋಚ್!
ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವು ಇನ್ನು ಮಾಸಿಲ್ಲ. ಟ್ರೋಫಿ ಗೆಲುವಿನ ನೆಚ್ಚಿನ ತಂಡವಾಗಿದ್ದ ಭಾರತ ಅಚಾನಕ್ಕಾಗಿ ಗೆಲುವು ಕೈತಪ್ಪಿದ್ದು ಹೇಗೆ? ಸೋಲಿನ ಕಾರಣಗಳನ್ನು ತಿಳಿಸುವಂತೆ ಬಿಸಿಸಿಐ ಇಂದು ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿಚಾರಣೆ ನಡೆಸಿದೆ. ಈ ವೇಳೆ ದ್ರಾವಿಡ್ ಅಸಮಾಧಾನ ತೋಡಿಕೊಂಡಿದ್ದಾರೆ.
ಮುಂಬೈ(ಡಿ.02) ಐಸಿಸಿ ವಿಶ್ವಕಪ್ ಟೂರ್ನಿ ಮುಗಿದು ಇದೀಗ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಫೈನಲ್ ಸೋಲಿನ ನೋವು ಮಾತ್ರ ಮಾಸಿಲ್ಲ. ಭಾರತ ಎಲ್ಲಾ ತಂಡಗಳನ್ನು ಬಗ್ಗು ಬಡಿದು ಸೋಲಿಲ್ಲದ ಸರದಾರನಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿತು. ಈ ಸೋಲಿಗೆ ಕಾರಣಗಳ ಕುರಿತು ಹಲವು ಚರ್ಚೆಗಳು ಆಗಿದೆ. ಇದೀಗ ಬಿಸಿಸಿಐ ಫೈನಲ್ ಸೋಲಿಗೆ ಕಾರಣಗಳನ್ನು ಕೇಳಲು ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿಚಾರಣೆ ನಡೆಸಿದೆ.
ಕೋಚ್ ರಾಹುಲ್ ದ್ರಾವಿಡ್ ಅವಧಿಯನ್ನು ಬಿಸಿಸಿಐ ಈಗಾಗಲೇ ವಿಸ್ತರಿಸುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ವಿಚಾರಣೆ ನಡೆಸಿ ಸೋಲಿಗೆ ಕಾರಣಗಳನ್ನು ಪಡೆದುಕೊಂಡಿದೆ. ಬಿಸಿಸಿಐ ಮಹತ್ವದ ಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ. ಈ ವೇಳೆ ರಾಹುಲ್ ದ್ರಾವಿಡ್ ಕೆಲ ವಿಚಾರದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಫೈನಲ್ ಪಂದ್ಯಕ್ಕೆ ಸಜ್ಜುಗೊಳಿಸಿದ ಪಿಚ್ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
Breaking: ವಿಶ್ವಕಪ್ ಸೋತ ಭಾರತಕ್ಕೆ ಆಸೀಸ್ ವಿರುದ್ಧ ಟಿ20 ಸರಣಿ ಜಯದ ಸಮಾಧಾನ!
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ತಜ್ಞರ ಸಮಿತಿ ಸೇರಿದಂತೆ ಹಲವು ಅಧಿಕಾರಿಗಳು ಸೋಲಿನ ಪರಾಮರ್ಶೆ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ದ್ರಾವಿಡ್ ಹಾಗೂ ರೋಹಿತ್ ಬಳಿಯಿಂದ ಉತ್ತರ ಪಡೆದುಕೊಳ್ಳಲಾಗಿದೆ. ಸ್ಲೋ ಪಿಚ್ ತಯಾರಿಸುವ ಅವಶ್ಯಕತೆ ಏನಿತ್ತು? ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಫೈನಲ್ ಪಂದ್ಯಕ್ಕೆ ಸ್ಲೋ ಪಿಚ್ ಸಜ್ಜುಗೊಳಿಸಿರುವುದು ಭಾರತಕ್ಕೆ ಮಾರಕವಾಗಿದೆ. ಇದೇ ಪಿಚ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಆಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಬ್ಯಾಟಿಂಗ್‌ನಲ್ಲಿ ತಿಣುಕಾಡಿತ್ತು. ಭಾರತ ಸುಲಭವಾಗಿ ಚೇಸ್ ಮಾಡಿ ಗೆದಿತ್ತು. ಹೀಗಾಗಿ ಸ್ಲೋ ಪಿಚ್‌ನಲ್ಲಿ ಪಂದ್ಯದ ಫಲಿತಾಂಶ ಟಾಸ್‌ನಲ್ಲೇ ಗೊತ್ತಾಗಲಿದೆ. ಇಂತಹ ಪಿಚ್‌ನಲ್ಲಿ ಭಾರತ ಟಾಸ್ ಸೋತಿತ್ತು ಎಂದು ದ್ರಾವಿಡ್ ಹೇಳಿದ್ದಾರೆ.
ಸ್ಟೇಡಿಯಂನ ಕಟ್ಟೆಯ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್!
ತವರಿನ ಪಿಚ್ ಭಾರತಕ್ಕೆ ವರವಾಗುವ ಬದಲು ಶಾಪವಾಗಿತ್ತು. ಭಾರತ ಯಾವುದೇ ಪಿಚ್‌ನಲ್ಲಿ ಆಡುವ ಸಾಮರ್ಥ್ಯ ಹೊಂದಿದೆ. ಆದರೆ ಅಹಮ್ಮದಾಬಾದ್ ಪಿಚ್ ಭಾರತಕ್ಕೆ ವರವಾಗಲಿಲ್ಲ. ಆಸ್ಟ್ರೇಲಿಯಾ ಬೌಲರ್‌ಗಳು ತಮ್ಮ ಪ್ಲಾನ್ ಪ್ರಕಾರ ಆಡಿ ಗೆಲುವಿನ ದಡ ಸೇರಿದ್ದಾರೆ. ಇದನ್ನು ಹೊರತುಪಡಿಸಿದರೆ ತಂಡದ ಹೋರಾಟ, ಅಪ್ರೋಚ್ ಯಾವೂದು ಕೂಡ ಬದಲಾಗಿಲ್ಲ. ಲೀಗ್ ಹಂತದಲ್ಲಿ ನೀಡಿದ ಶಕ್ತಿ ಮೀರಿದ ಪ್ರಯತ್ನವನ್ನೇ ಫೈನಲ್ ಪಂದ್ಯದಲ್ಲಿ ತಂಡ ನೀಡಿತ್ತು ಎಂದು ದ್ರಾವಿಡ್ ಹೇಳಿದ್ದಾರೆ.