ದಾದಾ ಬಿಜೆಪಿ ಸೇರ್ತಾರಾ? ಸೌರವ್ ಗಂಗೂಲಿ ಹೇಳಿದ್ದೇನು?
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ಸೇರ್ತಾರಾ ಎನ್ನುವ ಗುಸುಗುಸು ಸುದ್ದಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ದಾದಾ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೋಲ್ಕತ(ಡಿ.29): ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ಗವರ್ನರ್ ಅವರನ್ನು ಭೇಟಿಯಾದ ಬೆನ್ನಲ್ಲೇ ದಾದಾ ರಾಜಕೀಯ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದಿವೆ. ಸೌರವ್ ಗಂಗೂಲಿ ಡಿಸೆಂಬರ್ 27ರಂದು ರಾಜ್ಯಪಾಲರನ್ನು ಭೇಟಿಯಾಗಿದ್ದರು.
ಹೌದು, ದಾದಾ ಭಾನುವಾರ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಂತೆಯೇ, ಗಂಗೂಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಗಾಳಿಸುದ್ದಿ ಜೋರಾಗಿ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಡೆಲ್ಲಿಗೆ ಪ್ರಯಾಣ ಬೆಳೆಸಿದ ಸೌರವ್ ಗಂಗೂಲಿ, ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸ್ಥಾಪಿಸಲಾಗಿದ್ದ 6 ಅಡಿ ಎತ್ತರದ ಅರುಣ್ ಜೇಟ್ಲಿ ಪ್ರತಿಮೆ ಉದ್ಘಾಟನೆಗೆ ಆಗಮಿಸಿದ್ದ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹೀಗಾಗಿ ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆ ತೀರ್ಮಾನ ಪ್ರಕಟಿಸಲಿದ್ದಾರೆ ಎಂದೇ ಹೇಳಲಾಗುತಿತ್ತು.
ಗಾಯಗೊಂಡ ಹುಲಿಯನ್ನು ಕೆಣಕದಿರಿ; ಟೀಂ ಇಂಡಿಯಾ ಗೆಲುವನ್ನು ಕೊಂಡಾಡಿದ ನೆಟ್ಟಿಗರು
ಈ ಬಗ್ಗೆ ಸೌರವ್ ಗಂಗೂಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯಪಾಲರು ನಮ್ಮನ್ನು ಭೇಟಿಯಾಗಲು ಬಯಸಿದರೆ ನಾವು ಬೇಟಿಯಾಗಬೇಕು. ಈ ವಿಚಾರವನ್ನು ಅಷ್ಟಕ್ಕೆ ಬಿಡಿ ಎಂದು ಸೌರವ್ ಗಂಗೂಲಿ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಡಿಡಿಸಿಎ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ ಪ್ರತಿಷ್ಟಾಪನೆಗೆ ಬಿಷನ್ ಸಿಂಗ್ ಬೇಡಿ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದಾಗಿದೆ.