ನವದೆಹಲಿ(ಜ.29): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 14ನೇ ಆವೃತ್ತಿಗೆ ಕೌಂಟ್‌ಡೌನ್‌ ಶುರುವಾಗಿದ್ದು, ಎಲ್ಲ 8 ಫ್ರಾಂಚೈಸಿಗಳು ಆಟಗಾರರ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಸಿವೆ. ಆದರೆ ಬಿಸಿಸಿಐಗೆ ಮಾತ್ರ ಈ ವರ್ಷವೂ ಟೈಟಲ್‌ ಪ್ರಾಯೋಜಕತ್ವದ ಸಮಸ್ಯೆ ಎದುರಾಗಿದೆ.

2018ರಲ್ಲಿ ವಾರ್ಷಿಕ 440 ಕೋಟಿ ರು. ನೀಡುವುದಾಗಿ 5 ವರ್ಷಗಳ ಒಪ್ಪಂದಕ್ಕೆ ಚೀನಾದ ಮೊಬೈಲ್‌ ಕಂಪನಿ ವಿವೋ ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ ವರ್ಷ ವಿವೋ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಕೋವಿಡ್‌ ಸಂಕಷ್ಟದ ನಡುವೆಯೂ ಬಹಳಷ್ಟು ಪ್ರಯತ್ನ ನಡೆಸಿದ್ದ ಬಿಸಿಸಿಐ, ಕೊನೆಗೆ 222 ಕೋಟಿ ರು.ಗೆ ಟೈಟಲ್‌ ಪ್ರಾಯೋಜಕತ್ವವನ್ನು ಡ್ರೀಮ್‌ ಇಲೆವೆನ್‌ ಸಂಸ್ಥೆಗೆ ನೀಡಿತ್ತು.

ಈ ವರ್ಷ ಟೈಟಲ್‌ ಪ್ರಾಯೋಜಕತ್ವವನ್ನು ಮತ್ತೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲು ಬಿಸಿಸಿಐ ಯತ್ನಿಸುತ್ತಿದ್ದು, ಹಿನ್ನಡೆ ಉಂಟಾಗಿದೆ. ವಿವೋ ಕಂಪನಿಗೆ ಮತ್ತೆ ಪ್ರಾಯೋಜಕತ್ವ ಹಕ್ಕು ನೀಡಲು ಬಿಸಿಸಿಐ ಸಿದ್ಧವಿದೆ, ಆದರೆ ವಿವೋ ಕಂಪನಿ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಐಪಿಎಲ್‌ ಹರಾಜು: ವೇಗಿ ಉಮೇಶ್ ಯಾದವ್‌ ಮೇಲೆ ಕಣ್ಣಿಟ್ಟಿವೆ ಈ 3 ಫ್ರಾಂಚೈಸಿ..!

ಇನ್ನು ಕಳೆದ ವರ್ಷ ನೀಡಿದ್ದ ಮೊತ್ತಕ್ಕಿಂತ ದೊಡ್ಡ ಮೊತ್ತಕ್ಕೆ ಬಿಡ್‌ ಸಲ್ಲಿಸಿ ಟೈಟಲ್‌ ಪ್ರಾಯೋಜಕರಾಗಿ ಮುಂದುವರಿಯುವಂತೆ ಡ್ರೀಮ್‌ ಇಲೆವೆನ್‌ಗೆ ಬಿಸಿಸಿಐ ಸೂಚಿಸಿತ್ತು. ಆದರೆ ಡ್ರೀಮ್‌ ಇಲೆವೆನ್‌ ಸಂಸ್ಥೆ ಅದಕ್ಕೆ ನಿರಾಕರಿಸಿದ್ದು, ಕಳೆದ ವರ್ಷ ನೀಡಿದಷ್ಟೇ ಮೊತ್ತಕ್ಕೆ ಮತ್ತೆ ಒಪ್ಪಂದ ಮಾಡಿಕೊಳ್ಳುವುದಾಗಿ ತಿಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ, ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆ ಟೈಟಲ್‌ ಪ್ರಾಯೋಜಕರಿಲ್ಲದೆ ನಡೆಯಬಹುದು.