ಐಪಿಎಲ್ ಹರಾಜು: ವೇಗಿ ಉಮೇಶ್ ಯಾದವ್ ಮೇಲೆ ಕಣ್ಣಿಟ್ಟಿವೆ ಈ 3 ಫ್ರಾಂಚೈಸಿ..!
ಬೆಂಗಳೂರು: ಟೀಂ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡಿದೆ. ಇದರೊಂದಿಗೆ ಆರ್‌ಸಿಬಿ ಖಾತೆಯಲ್ಲಿ 4.2 ಕೋಟಿ ರುಪಾಯಿ ಉಳಿತಾಯವಾಗಿದೆ.
33 ವರ್ಷದ ಅನುಭವಿ ವೇಗಿಯ ಕಳೆದ ಎರಡು ಆವೃತ್ತಿಗಳಲ್ಲೂ ದುಬಾರಿ ಎನಿಸಿಕೊಂಡಿದ್ದರಿಂದ ಉಮೇಶ್ ಯಾದವ್ ಅವರನ್ನು ಬೆಂಗಳೂರು ಮೂಲದ ಫ್ರಾಂಚೈಸಿ ಕೈಬಿಟ್ಟಿದೆ. ಈ ಹಿನ್ನಲೆಯಲ್ಲಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಈ ಮೂರು ಫ್ರಾಂಚೈಸಿಗಳು ಉಮೇಶ್ ಯಾದವ್ ಅವರನ್ನು ಖರೀದಿಸುವ ಸಾಧ್ಯತೆಯಿದೆ.
1. ಚೆನ್ನೈ ಸೂಪರ್ ಕಿಂಗ್ಸ್:
ಚೆನ್ನೈ ತಂಡದಲ್ಲಿ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಹಾಗೂ ಸ್ಯಾಮ್ ಕರನ್ ಅವರಂತಹ ಸ್ವಿಂಗ್ ಸ್ಪೆಷಲಿಸ್ಟ್ ವೇಗಿಗಳಿದ್ದಾರೆ. ಆದರೆ ಮಾರಕ ವೇಗಿಗಳ ಕೊರತೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಎದುರಿಸುತ್ತಿದೆ.
ಪರ್ಸ್‌ನಲ್ಲಿ 22.9 ಕೋಟಿ ರುಪಾಯಿ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯನ್ನು ಈಗಾಗಲೇ ಉಮೇಶ್ ಯಾದವ್ ಅವರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದು, ನಾಗ್ಪುರ ವೇಗಿಯನ್ನು ಸಿಎಸ್‌ಕೆ ಫ್ರಾಂಚೈಸಿ ಖರೀದಿಸುವ ಸಾಧ್ಯತೆಯಿದೆ.
2. ಡೆಲ್ಲಿ ಕ್ಯಾಪಿಟಲ್ಸ್:
ಕಳೆದೆರಡು ಆವೃತ್ತಿಗಳಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಿ ಕೊನೆಯ ಕ್ಷಣದಲ್ಲಿ ಮುಗ್ಗರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೇಲ್ನೋಟಕ್ಕೆ ಸಮತೋಲಿತವಾಗಿಯೇ ಕಂಡು ಬರುತ್ತಿದೆ.
ಹೀಗಿದ್ದೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಶಾಂತ್ ಶರ್ಮಾ ಫಿಟ್ನೆಸ್ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಉಮೇಶ್ ಯಾದವ್‌ಗೆ ಡೆಲ್ಲಿ ಫ್ರಾಂಚೈಸಿ ಮಣೆ ಹಾಕುವ ಸಾಧ್ಯತೆಯಿದೆ.
3. ಕಿಂಗ್ಸ್ ಇಲೆವನ್ ಪಂಜಾಬ್:
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ 6 ಪಂದ್ಯ ಸೋತು ಆ ಬಳಿಕ ಕಮ್‌ಬ್ಯಾಕ್ ಮಾಡಿದ್ದ ಪಂಜಾಬ್ ತಂಡಕ್ಕೆ ಆಟಗಾರರ ಅಸ್ಥಿರ ಪ್ರದರ್ಶನ ಬಹುವಾಗಿ ಕಾಡುತ್ತಿದೆ.
ಮೊಹಮ್ಮದ್ ಶಮಿ ಜತೆಗೆ ಅನುಭವಿ ವೇಗಿ ಉಮೇಶ್ ಯಾದವ್ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದರೆ ವಿದೇಶಿ ಬೌಲರ್‌ಗಳನ್ನು ಡೆತ್ ಓವರ್‌ಗಳಲ್ಲಿ ತಂಡ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಹೀಗಾಗಿ ಪ್ರೀತಿ ಪಡೆ ಉಮೇಶ್ ಯಾದವ್ ಅವರನ್ನು ಖರೀದಿಸುವ ಸಾಧ್ಯತೆಯಿದೆ.