ನವದೆಹಲಿ(ಅ.29): ಐಪಿಎಲ್‌ ಆರಂಭಕ್ಕೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವೀಟರ್‌ ಕವರ್‌ ಪೋಸ್ಟರ್‌ನ್ನು ಬದಲಿಸಿ ಗೌರವ ಸೂಚಿಸಿದೆ. 

‘ಥ್ಯಾಂಕ್ಯೂ ಎಂ.ಎಸ್‌.ಧೋನಿ’ ಎಂಬ ಹ್ಯಾಶ್‌ಟ್ಯಾಗ್‌ನ ಪೋಸ್ಟರ್‌ ಪೋಸ್ಟ್‌ ಮಾಡಿ ಇಷ್ಟು ವರ್ಷ ಭಾರತ ತಂಡದ ಪರ ಆಡಿ, ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಅಭಿನಂದನೆ ಹೇಳಿದೆ. ಎಂ ಎಸ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಗೂ ನಿವೃತ್ತಿ ಘೋಷಿಸಿದ್ದರು. ಇದು ಅನೇಕ ಮಂದಿಗೆ ಭಾರಿ ಅಚ್ಚರಿ ಉಂಟುಮಾಡಿತ್ತು.

ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರ ಪೈಕಿ ಧೋನಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತ ತಂಡಕ್ಕೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಹೀಗೆ ಮೂರು ಐಸಿಸಿಗಳನ್ನು ಗೆದ್ದುಕೊಟ್ಟ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಧೋನಿ ಹೆಸರಿನಲ್ಲಿ.

IPL 2020: ಸಿಎಸ್‌ಕೆ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ಕೆಕೆಆರ್..!

ಧೋನಿ ಟೀಂ ಇಂಡಿಯಾ ಪಾಲಿಗೆ ಬರೀ ನಾಯಕನಾಗಿರದೇ ಗ್ರೇಟ್ ಫಿನಿಷರ್, ಚಾಣಾಕ್ಷ ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿದ್ದರು. ಇನ್ನು ಡಿಆರ್‌ಎಸ್(ಡಿಷಿಷನ್ ರಿವಿವ್ಯೂ ಸಿಸ್ಟಂ) ಧೋನಿ ರಿವೀವ್ಯೂ ಸಿಸ್ಟಂ ಎನ್ನುವಷ್ಟರ ಮಟ್ಟಿಗೆ ಬದಲಾಗಿತ್ತು.