Asianet Suvarna News Asianet Suvarna News

Wriddhiman Saha ಪತ್ರಕರ್ತನಿಂದ ವೃದ್ದಿಮಾನ್ ಸಾಹಗೆ ಧಮ್ಕಿ: ಬಿಸಿಸಿಐನಿಂದ ಕಠಿಣ ಕ್ರಮ..?

* ಟೀಂ ಇಂಡಿಯಾ ವಿಕೆಟ್‌ ಕೀಪರ್ ವೃದ್ದಿಮಾನ್ ಸಾಹ ಬೆಂಬಲಕ್ಕೆ ನಿಂತ ಬಿಸಿಸಿಐ

* ಸಂದರ್ಶನ ನೀಡದೆ ಇರುವುದಕ್ಕೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿದ್ದಾಗಿ ಟ್ವೀಟ್ ಮಾಡಿದ ಸಾಹ

* ಸಾಹ ಬೆಂಬಲಿಸಿ ಟ್ವೀಟ್‌ ಮಾಡಿರುವ ಮಾಜಿ ಕೋಚ್‌ ರವಿಶಾಸ್ತ್ರಿ, ಸೆಹ್ವಾಗ್

BCCI likely to probe Wriddhiman Saha tweet over threat from unnamed journalist Says Report kvn
Author
Bengaluru, First Published Feb 22, 2022, 10:25 AM IST

ನವದೆಹಲಿ(ಫೆ.22): ಪತ್ರಕರ್ತರೊಬ್ಬರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ ಸಾಹ (Wriddhiman Saha) ಆರೋಪಿಸಿದ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ (BCCI), ಮಾಧ್ಯಮಗಳಿಗೆ ಪ್ರತಿಕ್ರಿಯೆ, ಸಂದರ್ಶನ ನೀಡದಂತೆ ಆಟಗಾರರಿಗೆ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಸಂದರ್ಶನ ನೀಡದಿದ್ದಕ್ಕೆ ಪತ್ರಕರ್ತರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಸಾಹ ಸಾಮಾಜಿಕ ತಾಣಗಳಲ್ಲಿ ಬಹಿರಂಗಪಡಿಸಿದ ಬಳಿಕ ಬಿಸಿಸಿಐ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. 

ಇನ್ನು ಮುಂದೆ ಯಾವುದೇ ಆಟಗಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡುವ ಮೊದಲು ಬಿಸಿಸಿಐ ಅನುಮತಿ ಪಡೆಯಬೇಕು ಅಥವಾ ಬಿಸಿಸಿಐ ಮಾಧ್ಯಮ ಅಧಿಕಾರಿಗಳ ಜೊತೆಗೆ ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಬೇಕು, ನಿಯಮ ಉಲ್ಲಂಘಿಸಿದರೆ ಆಟಗಾರರನ್ನು ಅಮಾನತು ಮಾಡುವ ಬಗ್ಗೆ ಬಿಸಿಸಿಐ ನಿಯಮ ರೂಪಿಸಲಿದೆ ಎಂದು ಹೇಳಲಾಗುತ್ತಿದೆ.

ಪತ್ರಕರ್ತನ ವಿರುದ್ಧ ಟ್ವೀಟ್‌: ಸಾಹ ಜತೆ ಚರ್ಚಿಸಲಿರುವ ಶಾ

ನವದೆಹಲಿ: ಸಂದರ್ಶನ ನೀಡದೆ ಇರುವುದಕ್ಕೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಟ್ವೀಟರ್‌ನಲ್ಲಿ ಆರೋಪಿಸಿರುವ ಟೀಂ ಇಂಡಿಯಾ ಆಟಗಾರ ವೃದ್ಧಿಮಾನ್‌ ಸಾಹ ಜೊತೆ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ (Jay Shah) ಚರ್ಚಿಸಲಿದ್ದಾರೆ ಎಂದು ಖಜಾಂಚಿ ಅರುಣ್‌ ಧುಮಾಲ್‌ ಸೋಮವಾರ ತಿಳಿಸಿದ್ದಾರೆ. 

‘ನಿಜಕ್ಕೂ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಾಹ ಜೊತೆ ವಿವರ ಕೇಳುತ್ತೇವೆ. ಬೆದರಿಕೆ ಬಂದಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ವಿಚಾರದಲ್ಲಿ ಹೆಚ್ಚೇನೂ ಹೇಳುವುದಿಲ್ಲ. ಕಾರ‍್ಯದರ್ಶಿ ಜಯ್‌ ಶಾ ಖಂಡಿತವಾಗಿಯೂ ಸಾಹ ಜೊತೆ ಮಾತನಾಡುತ್ತಾರೆ’ ಎಂದು ಮಾಧ್ಯಮವೊಂದಕ್ಕೆ ಅರುಣ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಸಾಹ ಬೆಂಬಲಿಸಿ ಟ್ವೀಟ್‌ ಮಾಡಿರುವ ಮಾಜಿ ಕೋಚ್‌ ರವಿಶಾಸ್ತ್ರಿ(Ravi Shastri), ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್‌(Virender Sehwag), ಹರ್ಭಜನ್‌ ಸಿಂಗ್‌ ಸೇರಿ ಇನ್ನೂ ಅನೇಕರು ಬೆದರಿಕೆ ಹಾಕಿರುವ ಪತ್ರಕರ್ತನ ಹೆಸರು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.

ಸಾಹ ಹೇಳಿಕೆಯಿಂದ ನೋವಾಗಿಲ್ಲ: ದ್ರಾವಿಡ್‌

ಕೋಲ್ಕತಾ: ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಾಹ ಹೇಳಿಕೆಗೆ ಟೀಂ ಇಂಡಿಯಾ (Team India) ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಪ್ರತಿಕ್ರಿಯಿಸಿದ್ದು, ಸಾಹ ಹೇಳಿಕೆಯಿಂದ ತಮಗೆ ನೋವಾಗಿಲ್ಲ. ಅವರ ಬಗ್ಗೆ ನನಗೆ ಗೌರವ ಇದೆ ಎಂದಿದ್ದಾರೆ.

‘ಸಾಹ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯ ಬಗ್ಗೆ ನನಗೆ ಬಹಳ ಗೌರವವಿದೆ. ಅವರು ಪ್ರಾಮಾಣಿಕ ಪ್ರತಿಕ್ರಿಯೆ ಮತ್ತು ಸ್ಪಷ್ಟತೆಗೆ ಅರ್ಹರು. ಆದರೆ ಅವರ ಹೇಳಿಕೆ ಮಾಧ್ಯಮದ ಮೂಲಕ ನನಗೆ ಕೇಳಬಾರದಿತ್ತು ಎಂದಿದ್ದಾರೆ. ರಿಷಭ್‌ ಪಂತ್‌ (Rishabh Pant) ನಮ್ಮ ಮೊದಲ ಆದ್ಯತೆಯ ವಿಕೆಟ್‌ ಕೀಪರ್‌ ಆಗಿದ್ದಾರೆ. ಜೊತೆಗೆ ಇನ್ನೂ ಕೆಲವರನ್ನು ಬೆಳೆಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಲು ನಾನು ಪ್ರಯತ್ನಿಸುತ್ತಿದ್ದೆ. ಇದು ನನ್ನಲ್ಲಿ ಸಾಹ ಕುರಿತ ಭಾವನೆಗಳು ಅಥವಾ ಗೌರವವನ್ನು ಬದಲಾಯಿಸುವುದಿಲ್ಲ’ ಎಂದು ದ್ರಾವಿಡ್‌ ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ತಂಡದಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶಗೊಂಡಿದ್ದ ಸಾಹ, ದ.ಆಫ್ರಿಕಾ ಪ್ರವಾಸದ ವೇಳೆ ದ್ರಾವಿಡ್‌ ತಮಗೆ ನಿವೃತ್ತಿ ಪಡೆಯುವಂತೆ ಸೂಚಿಸಿದ್ದರು ಎಂದಿದ್ದರು.

Wriddhiman Saha: ದಾದಾ, ದ್ರಾವಿಡ್‌ ಮೇಲೆ ಗಂಭೀರವಾಗಿ ಆರೋಪಿಸಿದ ವೃದ್ದಿಮಾನ್ ಸಾಹ..!

ನಾನು ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ದ 61 ರನ್ ಬಾರಿಸಿದ್ದಾಗ, ದಾದಾ ನನಗೆ ವಾಟ್ಸ್‌ಆಪ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಈ ವೇಳೆ ಎಲ್ಲಿಯವರೆಗೂ ನಾನು ಬಿಸಿಸಿಐ ಅಧ್ಯಕ್ಷನಾಗಿರುತ್ತೇನೋ, ಅಲ್ಲಿಯವರೆಗೂ ನೀವು ತಂಡದಲ್ಲಿ ಇರುತ್ತೀರ. ಈ ಮೆಸೇಜ್ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತ್ತು. ನನಗೆ ಈಗಲೂ ಅರ್ಥವಾಗುತ್ತಿಲ್ಲ, ಇಷ್ಟು ಬೇಗ ಪರಿಸ್ಥಿತಿ ಬದಲಾಯಿತಾ ಎಂದು  ಪ್ರಶ್ನಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿಯೇ ರಾಹುಲ್ ದ್ರಾವಿಡ್ ಈ ವಿಚಾರವನ್ನು ತಿಳಿಸಿದ್ದರು. ಆದರೂ ಸಹಾ ನಾನು ಇನ್ನಷ್ಟು ದಿನಗಳ ಕಾಲ ತಂಡದಲ್ಲಿ ಮುಂದುವರೆಯುವ ವಿಶ್ವಾಸವಿತ್ತು. ಆದರೆ ಭಾರತ ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಯುವ ವಿಕೆಟ್ ಕೀಪರ್‌ಗಳತ್ತ ಆಯ್ಕೆ ಸಮಿತಿಯು ಚಿತ್ತ ನೆಟ್ಟಿದೆ ಎಂದು ದ್ರಾವಿಡ್ ತಮಗೆ ತಿಳಿಸಿದ್ದರು ಎಂದು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದರು.

Follow Us:
Download App:
  • android
  • ios