Wriddhiman Saha: ದಾದಾ, ದ್ರಾವಿಡ್ ಮೇಲೆ ಗಂಭೀರವಾಗಿ ಆರೋಪಿಸಿದ ವೃದ್ದಿಮಾನ್ ಸಾಹ..!
ಕೋಲ್ಕತಾ: ಟೀಂ ಇಂಡಿಯಾ (Team India) ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ (Wriddhiman Saha) ಅವರನ್ನು ಮುಂಬರುವ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಗೆ ತಂಡದಿಂದ ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಸಾಹ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹಾಗೂ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ದ್ವಿಮುಖ ನೀತಿಯ ಬಗ್ಗೆ ಕಿಡಿಕಾರಿದ್ದಾರೆ.
ಶ್ರೀಲಂಕಾ ವಿರುದ್ದ ತವರಿನಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪ್ರಮುಖ ನಾಲ್ವರು ಆಟಗಾರರು ವಿಫಲರಾಗಿದ್ದಾರೆ. ಈ ಪೈಕಿ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಕೂಡಾ ಒಬ್ಬರೆನಿಸಿದ್ದಾರೆ.
ಚೇತನ್ ಶರ್ಮಾ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿ ಹಾಗೂ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಶನಿವಾರ(ಫೆ.20) ಆಯ್ಕೆ ಮಾಡಿದ್ದು, 37 ವರ್ಷದ ಸಾಹ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಇದರ ಬೆನ್ನಲ್ಲೇ ವೃದ್ದಿಮಾನ್ ಸಾಹ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇನ್ನು ಸಾಹ ಅವರನ್ನು ತಂಡದಿಂದ ಹೊರಗಿಡಲು ಅವರ ವಯಸ್ಸು ಕೂಡಾ ಒಂದು ಕಾರಣವೆಂದು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಹೇಳಿದ್ದಾರೆ.
ಆದರೆ ಸಾಹ ಈ ಮಾತನ್ನು ಒಪ್ಪಲು ತಯಾರಿಲ್ಲ. ಕಳೆದ ನವೆಂಬರ್‌ನಲ್ಲಿ ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದ ವೇಳೆ ನಾನು ಕತ್ತು ನೋವಿದ್ದರೂ ಸಹ, ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ದಿಟ್ಟ 61 ರನ್ ಬಾರಿಸಿದ್ದೆ, ಆಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಮ್ಮ ಸ್ಥಾನ ಭದ್ರವಾಗಿದೆ ಎಂದಿದ್ದರು. ಆದರೀಗ ವಾಸ್ತವ ಬದಲಾಗಿದೆ ಎಂದು ಸಾಹ ಆರೋಪಿಸಿದ್ದಾರೆ
ನಾನು ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ದ 61 ರನ್ ಬಾರಿಸಿದ್ದಾಗ, ದಾದಾ ನನಗೆ ವಾಟ್ಸ್‌ಆಪ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಈ ವೇಳೆ ಎಲ್ಲಿಯವರೆಗೂ ನಾನು ಬಿಸಿಸಿಐ ಅಧ್ಯಕ್ಷನಾಗಿರುತ್ತೇನೋ, ಅಲ್ಲಿಯವರೆಗೂ ನೀವು ತಂಡದಲ್ಲಿ ಇರುತ್ತೀರ. ಈ ಮೆಸೇಜ್ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತ್ತು. ನನಗೆ ಈಗಲೂ ಅರ್ಥವಾಗುತ್ತಿಲ್ಲ, ಇಷ್ಟು ಬೇಗ ಪರಿಸ್ಥಿತಿ ಬದಲಾಯಿತಾ ಎಂದು 'ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಇದೆಲ್ಲದರ ಹೊರತಾಗಿಯೂ, ಲಂಕಾ ಎದುರಿನ ಸರಣಿಗೆ ಆಯ್ಕೆ ಸಮಿತಿಯು ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ತೀರಾ ಅಚ್ಚರಿಯನ್ನು ಸಾಹ ವ್ಯಕ್ತಪಡಿಸಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿಯೇ ರಾಹುಲ್ ದ್ರಾವಿಡ್ ಈ ವಿಚಾರವನ್ನು ತಿಳಿಸಿದ್ದರು. ಆದರೂ ಸಹಾ ನಾನು ಇನ್ನಷ್ಟು ದಿನಗಳ ಕಾಲ ತಂಡದಲ್ಲಿ ಮುಂದುವರೆಯುವ ವಿಶ್ವಾಸವಿತ್ತು. ಆದರೆ ಭಾರತ ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಯುವ ವಿಕೆಟ್ ಕೀಪರ್‌ಗಳತ್ತ ಆಯ್ಕೆ ಸಮಿತಿಯು ಚಿತ್ತ ನೆಟ್ಟಿದೆ ಎಂದು ದ್ರಾವಿಡ್ ತಮಗೆ ತಿಳಿಸಿದ್ದರು ಎಂದಿದ್ದಾರೆ.
ರಾಹುಲ್ ದ್ರಾವಿಡ್ ಸರ್ ತಮ್ಮ ಬಳಿ ಬಂದು, ಈ ವಿಚಾರವನ್ನು ಹೇಗೆ ಪ್ರಸ್ತಾಪಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಆಯ್ಕೆ ಸಮಿತಿಯ ಕೆಲವರು ಹಾಗೂ ಟೀಂ ಮ್ಯಾನೇಜ್‌ಮೆಂಟ್ ಬೇರೆ ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡುವ ಕುರಿತಂತೆ ಚಿಂತನೆ ನಡೆಸುತ್ತಿದೆ. ನಿಮ್ಮ ವಯಸ್ಸು ಹಾಗೂ ಪ್ರದರ್ಶನ ಮಾತ್ರ ಕಾರಣವಲ್ಲ, ಅವರೆಲ್ಲರೂ ಯುವ ಪ್ರತಿಭಾನ್ವಿತ ಆಟಗಾರರನ್ನು ತಂಡದೊಳಗೆ ಸೇರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇನ್ನು ಮುಂದೆ ನೀವು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ದ್ರಾವಿಡ್ ತಮಗೆ ಹೇಳಿದ್ದಾಗಿ ಸಾಹ ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದಾರೆ.
ರಿಷಭ್ ಪಂತ್‌ಗೆ ಬ್ಯಾಕ್ ಅಪ್ ಆಗಿ ಕೆ.ಎಸ್. ಭರತ್ ಅವರನ್ನು ಬೆಳೆಸುತ್ತಿರುವುದಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ವೃದ್ದಿಮಾನ್ ಸಾಹ ಅವರ ಟೆಸ್ಟ್ ವೃತ್ತಿಜೀವನ ಬಹುತೇಕ ಅಂತ್ಯವಾದಂತೆ ಆಗಿದೆ.