ನವದೆಹಲಿ(ಜ.29): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಎಲ್ಲಿ ನಡೆಸಬೇಕು ಎನ್ನುವುದನ್ನು ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ ಆಟಗಾರರ ಹರಾಜಿನ ಬಳಿಕ ನಿಗದಿಪಡಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಇದರಿಂದಾಗಿ ಫ್ರಾಂಚೈಸಿಗಳಲ್ಲಿ ಗೊಂದಲ ಶುರುವಾಗಿದೆ. ಕಳೆದ ವರ್ಷ ಟೂರ್ನಿ ಭಾರತದಲ್ಲಿ ನಡೆಯಲಿದೆ ಎನ್ನುವ ಲೆಕ್ಕಾಚಾರದೊಂದಿಗೆ ತಂಡಗಳು ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದ್ದವು. ಆದರೆ ಕೋವಿಡ್‌ನಿಂದಾಗಿ ಟೂರ್ನಿ ಯುಎಇಗೆ ಸ್ಥಳಾಂತರಗೊಂಡ ಕಾರಣ, ಅಲ್ಲಿನ ಪಿಚ್‌ ಹಾಗೂ ವಾತಾವರಣಕ್ಕೆ ಸರಿಹೊಂದುವ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ಬಹುತೇಕ ತಂಡಗಳು ಸಮಸ್ಯೆ ಎದುರಿಸಿದವು. ಈ ಬಾರಿಯೂ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡುವ ಆಯ್ಕೆಯನ್ನು ಬಿಸಿಸಿಐ ಹೊಂದಿದ್ದು, ಫ್ರಾಂಚೈಸಿಗಳು ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಈ ಬಾರಿ ಭಾರತದಲ್ಲೇ ಐಪಿಎಲ್‌ ಆಯೋಜಿಸಲು ಎಲ್ಲಾ ಸಾಧ್ಯತೆಗಳನ್ನು ಬಿಸಿಸಿಐ ಅವಲೋಕಿಸುತ್ತಿದೆ. ಒಂದು ವೇಳೆ ಭಾರತದಲ್ಲಿ 14ನೇ ಆವೃತ್ತಿಯ ಐಪಿಎಲ್‌ ಆಯೋಜಿಸಲು ಸಾಧ್ಯವಾಗದಿದ್ದರೆ, ಮತ್ತೊಮ್ಮೆ ಯುಎಇನಲ್ಲಿಯೇ ಚುಟುಕು ಕ್ರಿಕೆಟ್ ಟೂರ್ನಿ ನಡೆಸಲು ಬಿಸಿಸಿಐ ಮುಂದಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

14ನೇ ಆವೃತ್ತಿ ಐಪಿಎಲ್‌ಗೂ ಟೈಟಲ್ ಪ್ರಾಯೋಜಕತ್ವ ಬಿಕ್ಕಟ್ಟು..?

ಒಂದು ವೇಳೆ ಭಾರತದಲ್ಲೇ ಐಪಿಎಲ್ ಟೂರ್ನಿ ನಡೆದರೆ ಕ್ರಿಕೆಟ್ ಅಭಿಮಾನಿಗಳನ್ನು ಮೈದಾನದೊಳಗೆ ಬರಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಕಂಡುಕೊಂಡಂತೆ ಇಲ್ಲ. ಮುಂದಿನ ದಿನಗಳಲ್ಲಿ ಕೊರೋನಾ ಪರಿಸ್ಥಿತಿ ಹೇಗಿರಲಿದೆ ಎನ್ನುವುದನ್ನು ಗಮನಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಎದುರು ನೋಡುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು.