ಮುಂಬೈ(ನ.30): ಯುಎಇಯಲ್ಲಿ ಯಶಸ್ವಿ ಐಪಿಎಲ್‌ ಆಯೋಜನೆ ಬಳಿಕ ಬಿಸಿಸಿಐ ದೇಶದಲ್ಲಿ ಕ್ರಿಕೆಟ್‌ ಚಟುವಟಿಕೆಯನ್ನು ಶೀಘ್ರ ಆರಂಭಿಸುವ ನಿರ್ಧಾರಕ್ಕೆ ಬಂದಿದೆ. 
ದೇಶದಲ್ಲಿ 6 ಬಯೋ-ಸೆಕ್ಯುರ್‌ ಹಬ್ಸ್‌ ನಿರ್ಮಿಸಿ ಅಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸುವ ಯೋಚನೆ ಬಿಸಿಸಿಐ ನದ್ದಾಗಿದೆ. ಈ ಮೂಲಕ ಬಿಸಿಸಿಐ ಸುಮಾರು 9 ತಿಂಗಳ ಬಳಿಕ ದೇಶದಲ್ಲಿ ದೇಶೀಯ ಕ್ರಿಕೆಟ್‌ ಟೂರ್ನಿಗಳಿಗೆ ವೇದಿಕೆ ಸಜ್ಜುಗೊಳಿಸಿದೆ. ಇದಕ್ಕಾಗಿ ಬಿಸಿಸಿಐ, ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ಅಭಿಪ್ರಾಯ ಸಂಗ್ರಹಿಸುತ್ತಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ 4 ಆಯ್ಕೆಗಳನ್ನು ನೀಡಿದೆ.

1. ರಣಜಿ ಟ್ರೋಫಿ ಮಾತ್ರ ಆಯೋಜನೆ

2. ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಮಾತ್ರ ಆಯೋಜನೆ

3. ರಣಜಿ ಟ್ರೋಫಿ ಮತ್ತು ಸಯ್ಯದ್‌ ಮುಷ್ತಾಕ್‌ ಅಲಿ ಆಯೋಜನೆ

4. ಸಯ್ಯದ್‌ ಮುಷ್ತಾಕ್‌ ಅಲಿ ಮತ್ತು ವಿಜಯ್‌ ಹಜಾರೆ ಟ್ರೋಫಿ ಆಯೋಜನೆ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 (ಡಿ 20 ರಿಂದ ಜ. 10) 22 ದಿನ, ರಣಜಿ ಟ್ರೋಫಿ (ಜ. 11 ರಿಂದ ಮಾರ್ಚ್ 18) 67 ದಿನ, ಆಯೋಜಿಸಲು ಸಾಧ್ಯತೆ ಇದ್ದರೆ ವಿಜಯ್‌ ಹಜಾರೆ ಟ್ರೋಫಿ (ಜ.11 ರಿಂದ ಫೆ. 7) 28 ದಿನ ನಡೆಸಬಹುದಾಗಿದೆ.

ಭಾರತಕ್ಕೆ ಮತ್ತೊಂದು ಸೋಲು; ಏಕದಿನ ಸರಣಿ ಆಸೀಸ್ ಪಾಲು

ಕೊರೋನಾದಿಂದಾಗಿ ದೇಶೀಯ ಕ್ರಿಕೆಟ್‌ ಟೂರ್ನಿ ನಡೆಸುವುದು ಸವಾಲಾಗಿದೆ. ಕೊರೋನಾ ಕಾಲದಲ್ಲಿ ಟೂರ್ನಿ ಆಯೋಜನೆ ಬಗ್ಗೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳೇ ನಿರ್ಧರಿಸಲಿ ಎನ್ನುವ ಸಲುವಾಗಿ 4 ಆಯ್ಕೆಗಳನ್ನು ನೀಡಲಾಗಿದೆ. 38 ತಂಡಗಳಿಗಾಗಿ ಬಿಸಿಸಿಐ 6 ಬಯೋ-ಸೆಕ್ಯುರ್‌ ಹಬ್ಸ್‌ ನಿರ್ಮಿಸಲು ಮುಂದಾಗಿದೆ. 38 ತಂಡಗಳನ್ನು 5 ಎಲೈಟ್‌ ಗುಂಪುಗಳು, ಪ್ರತಿ ಗುಂಪಿನಲ್ಲಿ 6 ತಂಡಗಳು ಹಾಗೂ ಪ್ಲೇಟ್‌ ಗುಂಪಿನಲ್ಲಿ 8 ತಂಡಗಳನ್ನು ವಿಂಗಡಿಸಲಾಗುವುದು. ಎಲ್ಲಾ ಪಂದ್ಯಗಳ ನೇರಪ್ರಸಾರ ಮಾಡಲು ಬಿಸಿಸಿಐ ಯೋಜನೆ ಹಾಕಿ ಕೊಂಡಿದೆ ಎನ್ನಲಾಗಿದೆ.