ಸಿಡ್ನಿ(ನ.29): ಟೀಂ ಇಂಡಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 51 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.  

ಆಸ್ಟ್ರೇಲಿಯಾ ನೀಡಿದ್ದ 390 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಶಿಖರ್ ಧವನ್ ಹಾಗೂ ಮಯಾಂಕ್‌ ಅಗರ್‌ವಾಲ್ ಅರ್ಧಶತಕ(58)ದ ಜತೆಯಾಟವಾಡಿದರು. ಆದರೆ ಈ ಜೋಡಿ ದೊಡ್ಡ ಇನಿಂಗ್ಸ್ ಆಡಲು ವಿಫಲವಾಯಿತು. ಧವನ್ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮಯಾಂಕ್ ಆಟ ಕೇವಲ 28 ರನ್‌ಗಳಿಗೆ ಸೀಮಿತವಾಯಿತು. ಈ ವೇಳೆ ಟೀಂ ಇಂಡಿಯಾ ಸ್ಕೋರ್ 8.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 60 ರನ್

ಆಸರೆಯಾದ ಕೊಹ್ಲಿ-ಅಯ್ಯರ್: ಕೇವಲ 2 ಅಂತರದಲ್ಲಿ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್‌ಗೆ 93 ರನ್‌ಗಳ ಜತೆಯಾಟವಾಡಿತು. ಕೊಹ್ಲಿ ಜತೆ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 5 ಬೌಂಡರಿ ಸಹಿತ 38 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

ಆಸೀಸ್ ವಿರುದ್ಧ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ..!

ಅಬ್ಬರಿಸಿದ ಕೊಹ್ಲಿ-ರಾಹುಲ್: ಅಯ್ಯರ್ ವಿಕೆಟ್ ಪತನದ ಬಳಿಕ ನಾಯಕ ವಿರಾಟ್ ಕೊಹ್ಲಿಯನ್ನು ಕೂಡಿಕೊಂಡ ರಾಹುಲ್ ರನ್‌ ಗಳಿಕೆಗೆ ಚುರುಕು ಮುಟ್ಟಿಸುವ ಯತ್ನ ಮಾಡಿದರು. 4ನೇ ವಿಕೆಟ್‌ಗೆ ಈ ಜೋಡಿ 72 ರನ್‌ಗಳ ಜತೆಯಾಟವಾಡಿತು. ನಾಯಕ ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 7  ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 89 ರನ್ ಬಾರಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಪಾಂಡ್ಯ ಹಾಗೂ ರಾಹುಲ್ ಜೋಡಿ 63 ರನ್‌ಗಳ ಜತೆಯಾಟ ನಿಭಾಯಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಹುಲ್ 66 ಎಸೆತಗಳಲ್ಲಿ 4 ಬೌಂಡರಿ ಹಾಗೂ 5  ಸಿಕ್ಸರ್ ನೆರವಿನಿಂದ 76 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಪಾಂಡ್ಯ ಆಟ 28 ರನ್‌ಗಳಿಗೆ ಸೀಮಿತವಾದರೆ, ಜಡೇಜಾ 11 ಎಸೆತಗಳಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಒಂದೇ ಓವರ್‌ನಲ್ಲಿ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಕಬಳಿಸುವ ಮೂಲಕ ಪ್ಯಾಟ್‌ ಕಮಿನ್ಸ್‌ ಸಂಪೂರ್ಣ ಪಂದ್ಯ ಅಸೀಸ್‌ ಕಡೆ ವಾಲುವಂತೆ ಮಾಡಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್(104) ಆಕರ್ಷಕ ಶತಕ, ಇನ್ನುಳಿದಂತೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್(83), ಫಿಂಚ್(60), ಮಾರ್ನಸ್ ಲಬುಶೇನ್(70) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬಾರಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 389 ರನ್ ಬಾರಿಸಿತ್ತು.