ಕೇಂದ್ರ ಸರ್ಕಾರವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಿಸುವ ನಿರ್ಧಾರದಿಂದ ಹಿಂದೆ ಸರಿದಿದೆ. ಸರ್ಕಾರದಿಂದ ಯಾವುದೇ ಹಣಕಾಸು ನೆರವು ಪಡೆಯದ ಕಾರಣ ಬಿಸಿಸಿಐ ಆರ್‌ಟಿಐ ವ್ಯಾಪ್ತಿಯಿಂದ ಹೊರಗುಳಿಯಲಿದೆ.

ನವದೆಹಲಿ: ವಿಶ್ವದ ಸಿರಿವಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ನಿಯಂತ್ರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಿಸುವ ನಿರ್ಧಾರವನ್ನು ಕೈಬಿಟ್ಟಿದೆ.

ಖಾಸಗಿಯಾಗಿಯೇ ಉಳಿದಿರುವ ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಗೆ ಸೇರಿಸಲು ಕಳೆದ ಜು.23ರಂದು ಕ್ರೀಡಾ ಸಚಿವ ಮಾನುಖ್ ಮಾಂಡವೀಯ ಅವರು ಸಂಸತ್‌ನಲ್ಲಿ ಮಸೂದೆ ಮಂಡಿಸಿದ್ದರು. ಮಸೂದೆ ಪ್ರಕಾರ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐ ವ್ಯಾಪ್ತಿಗೆ ಬರಲಿದ್ದು, ಇದರಿಂದ ಬಿಸಿಸಿಐ ಕೂಡಾ ಹೊರತಾಗಿಲ್ಲ ಎಂದು ಸಚಿವರು ಹೇಳಿದ್ದರು.

ಆದರೆ ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಪಡೆಯದ ಬಿಸಿಸಿಐ, ಆರ್ಥಿಕ ಸ್ವಾವಲಂಬನೆ ಹೊಂದಿದೆ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಬರಲು ಬಿಸಿಸಿಐ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿತ್ತು. ಸದ್ಯ ಕ್ರೀಡಾ ಸಚಿವಾಲಯ ತನ್ನ ನಿಯಮದಲ್ಲಿ ಪರಿಷ್ಕರಣೆ ಮಾಡಿದ್ದು, ಸರ್ಕಾರದಿಂದ ನೆರವು ಪಡೆಯುವ ಸಂಸ್ಥೆಗಳನ್ನು ಮಾತ್ರ ಆರ್‌ಟಿಐ ವ್ಯಾಪ್ತಿಗೆ ತರಲು ನಿರ್ಧರಿಸಿದೆ. ಇದರೊಂದಿಗೆ ಬಿಸಿಸಿಐ ವ್ಯಾಪ್ತಿಯಿಂದ ಹೊರಗುಳಿಯಲಿದೆ.

ಬಿಸಿಸಿಐಗೆ ರಿಲೀಫ್

ಒಂದು ವೇಳೆ ಆರ್‌ಟಿಐ ವ್ಯಾಪ್ತಿಗೆ ಸೇರಿದ್ದರೆ ಬಿಸಿಸಿಐಗೆ ಮೂಗುದಾರ ಬೀಳುತ್ತಿತ್ತು. ತಾನು ನಿರ್ಧಾರಗಳನ್ನು ಕೈಗೊಳ್ಳುವ ವಿಧಾನ, ಹಣಕಾಸು ದಾಖಲೆಗಳ ನಿರ್ವಹಣೆ ಹಾಗೂ ಅವುಗಳಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಕಟಣೆ ಹೊರಡಿಸು ವಾಗ ಎಚ್ಚರಿಕೆ ವಹಿಸಬೇಕಿತ್ತು. ತಂಡಗಳ ಆಯ್ಕೆಗೆ ಅನುಸರಿಸುವ ಮಾದರಿ ಹಾಗೂ ಮಾನದಂಡ, ಆಂತರಿಕ ಆಡಳಿತ ರಚನೆ ವಿಚಾರದಲ್ಲೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಿತ್ತು.

ಆರ್‌ಟಿಐಗೆ ಸೇರ್ಪಡೆ ಕೋರ್ಟಲ್ಲಿ ಪ್ರಶ್ನಿಸಲು ಮುಂದಾಗಿದ್ದ ಬಿಸಿಸಿಐ?

ಬಿಸಿಸಿಐ ಖಾಸಗಿ ಸಂಸ್ಥೆಯಾಗಿದ್ದು, ಸರ್ಕಾರದಿಂದ ಯಾವುದೇ ನೆರವು ಪಡೆಯಲ್ಲ. ಹೀಗಾಗಿ ಬಿಸಿಸಿಐ 'ಸಾರ್ವಜನಿಕ ಪ್ರಾಧಿಕಾರ' ಅಲ್ಲ ಎಂಬುದು ಮಂಡಳಿಯ ವಾದ. ಇದೇ ಕಾರಣಕ್ಕೆ ಹಿಂದಿನಿಂದಲೂ ಆರ್‌ಟಿಐ ವ್ಯಾಪ್ತಿಗೆ ಬರಲು ಬಿಸಿಸಿಐ ನಿರಾಕರಿಸುತ್ತಿತ್ತು. ಇತ್ತೀಚೆಗೆ ಸರ್ಕಾರ ಹೊಸ ಕ್ರೀಡಾ ಆಡಳಿತ ಮಸೂದೆ ಮಂಡಿಸಿದ್ದು, ಅದರಲ್ಲಿ ಬಿಸಿಸಿಐಅನ್ನು ಆರ್‌ಟಿಐ ವ್ಯಾಪ್ತಿಗೆ ಸೇರಿಸುವ ಅಂಶವಿತ್ತು. ಅದನ್ನು ಪ್ರಶ್ನಿಸಿ ಬಿಸಿಸಿಐ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದಾಗಿ ವರದಿಯಾಗಿದೆ. ಆದರೆ ಅದಕ್ಕೂ ಮೊದಲೇ ಕ್ರೀಡಾ ಸಚಿವಾಲಯವು ಮಸೂದೆಯಲ್ಲಿ ಬದಲಾವಣೆ ಮಾಡಿದೆ.

ತವರಿಗೆ ಮರಳಿದ ಟೀಂ ಇಂಡಿಯಾ ಆಟಗಾರರು

ಲಂಡನ್‌: ಓವಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ 5ನೇ ಪಂದ್ಯದಲ್ಲಿ ರೋಚಕ ಜಯಭೇರಿ ಬಾರಿಸುವ ಮೂಲಕ ಸರಣಿ ಡ್ರಾ ಮಾಡಿಕೊಂಡ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಆಟಗಾರರು ಒಬ್ಬೊಬ್ಬರಾಗಿಯೇ ತವರಿನತ್ತ ಪ್ರಯಾಣ ಬೆಳೆಸಿದ್ದಾರೆ. ಕೊನೆಯ ಟೆಸ್ಟ್‌ ಗೆಲುವಿನ ರೂವಾರಿ ಮೊಹಮ್ಮದ್‌ ಸಿರಾಜ್, ಆರ್ಶ್‌ದೀಪ್ ಸಿಂಗ್, ಶಾರ್ದೂಲ್ ಠಾಕೂರ್‌ ತವರಿಗೆ ಮರಳಿದ್ದಾರೆ. ಕೋಚ್‌ ಗಂಭೀರ್‌ ಕೂಡಾ ತವರಿಗೆ ಹಿಂದಿರುಗಿದ್ದಾರೆ. ಆರ್ಶ್‌ದೀಪ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಕೆಲ ಆಟಗಾರರು ಲಂಡನ್‌ನಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಮಹಾರಾಣಿ ಟ್ರೋಫಿ ಟಿ20: ಹುಬ್ಬಳ್ಳಿ, ಮೈಸೂರಿಗೆ ಜಯ

ಬೆಂಗಳೂರು: ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಟಿ20 ಲೀಗ್‌ನಲ್ಲಿ ಹುಬ್ಬಳ್ಳಿ ಸತತ 2ನೇ ಗೆಲುವು ಸಾಧಿಸಿದೆ. ಬುಧವಾರ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಹುಬ್ಬಳ್ಳಿ 35 ರನ್‌ಗಳಲ್ಲಿ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 5 ವಿಕೆಟ್‌ಗೆ 163 ರನ್ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಮಂಗಳೂರು 8 ವಿಕೆಟ್‌ಗೆ 128 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಇನ್ನೊಂದು ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ವಿರುದ್ಧ ಮೈಸೂರು ವಾರಿಯರ್ಸ್‌ 27 ರನ್‌ಗಳಲ್ಲಿ ಗೆದ್ದಿತು. ಮೈಸೂರು 6 ವಿಕೆಟ್‌ಗೆ 140 ರನ್‌ ಗಳಿಸಿದರೆ, ಗುರಿ ಬೆನ್ನತ್ತಿದ ಶಿವಮೊಗ್ಗ 7 ವಿಕೆಟ್‌ಗೆ 113 ರನ್‌ ಗಳಿಸಲಷ್ಟೇ ಶಕ್ತವಾಯಿತು.