* ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮನೆಯಲ್ಲಿಯೇ ಕೋವಿಡ್ ಟೆಸ್ಟ್*  ಜೂನ್ 2ರಂದು ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಹೊರಡಲಿದೆ.* ಇಂಗ್ಲೆಂಡ್‌ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ 5 ಪಂದ್ಯಗಳ ಟೆಸ್ಟ್ ಪಂದ್ಯವನ್ನಾಡಲಿರುವ ಭಾರತ

ನವದೆಹಲಿ(ಮೇ.13): ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತೀಯ ಕ್ರಿಕೆಟಿಗರಿಗೆ ಮನೆಯಲ್ಲಿಯೇ ಕೋವಿಡ್‌ ಪರೀಕ್ಷೆ ನಡೆಸಲು ಬಿಸಿಸಿಐ ವ್ಯವಸ್ಥೆ ಮಾಡಿದೆ. ಆಟಗಾರರು ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಆಟಗಾರರು ಮೇ 17 ಇಲ್ಲವೇ 18ರಂದು ಮುಂಬೈ ತಲುಪಲಿದ್ದು, ಬಿಸಿಸಿಐ ಸಿದ್ಧಗೊಳಿಸಿರುವ ಬಯೋ ಬಬಲ್‌ನೊಳಕ್ಕೆ ಪ್ರವೇಶಿಸಲಿದ್ದಾರೆ. 14 ದಿನಗಳ ಕ್ವಾರಂಟೈನ್‌ ಬಳಿಕ ಜೂ.2ರಂದು ತಂಡ ಇಂಗ್ಲೆಂಡ್‌ಗೆ ಹೊರಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮನೆಯಿಂದ ಹೊರಬರದಂತೆ ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ

ಈಗಾಗಲೇ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಯಾವುದೇ ಆಟಗಾರನಿಗೆ ಕೋವಿಡ್ ಪಾಸಿಟಿವ್ ಬಂದರೆ ಆತನನ್ನು ತಂಡದಿಂದ ಕೈಬಿಡಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ಆಟಗಾರರು ಕೋವಿಡ್‌ ಸೋಂಕು ತಗುಲದಂತೆ ಮಾಡಲು ಆಟಗಾರರಿಗೆ ಮನೆಯಲ್ಲಿಯೇ ಪರೀಕ್ಷೆ ಮಾಡಲು ಬಿಸಿಸಿಐ ತೀರ್ಮಾನಿಸಿದೆ.

ಬಹುನಿರೀಕ್ಷಿತ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಇದಾದ ಬಳಿಕ ಆಗಸ್ಟ್ 04ರಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona