Asianet Suvarna News Asianet Suvarna News

India Tour of Africa: ಕೋವಿಡ್ ಭೀತಿಯ ನಡುವೆಯೂ ಆಫ್ರಿಕಾಗೆ ಟೀಂ ಇಂಡಿಯಾ ಪ್ರವಾಸ

* ಭಾರತ ತಂಡದ ಆಫ್ರಿಕಾ ಪ್ರವಾಸ ಖಚಿತಪಡಿಸಿದ ಬಿಸಿಸಿಐ

* ಆದರೆ ಒಂದು ವಾರ ತಡವಾಗಿ ಟೆಸ್ಟ್‌ ಸರಣಿ ಆರಂಭ

* ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಹತ್ವದ ತೀರ್ಮಾನ

BCCI AGM Confirms Team India tour of South Africa to begin on December 26 kvn
Author
Bengaluru, First Published Dec 5, 2021, 10:24 AM IST

ಕೋಲ್ಕತ(ಡಿ.05): ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) (BCCI) ಒಪ್ಪಿಗೆ ನೀಡಿದೆ. ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (BCCI Annual General Meeting) ಸರಣಿಗೆ ಒಪ್ಪಿಗೆ ಸೂಚಿಸಿದೆ. ಆದರೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಟೀಂ ಇಂಡಿಯಾ (Team India) ಒಂದು ವಾರ ತಡವಾಗಿ ಪ್ರಯಾಣ ಬೆಳೆಸಲಿದೆ ಎಂದು ತಿಳಿಸಿದೆ. ಈ ಮೊದಲು ನಿಗದಿ ಮಾಡಿದಂತೆ ಭಾರತ ತಂಡ ಡಿಸೆಂಬರ್ 9ಕ್ಕೆ ದ.ಆಫ್ರಿಕಾಕ್ಕೆ ತೆರಳಬೇಕಿತ್ತು.

ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ ಭೀತಿ (COVID-19 Omicron variant) ನಡುವೆಯೂ ಪ್ರವಾಸ ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ಕಠಿಣ ಬಯೋಬಬಲ್‌ (Bio Bubble) ವ್ಯವಸ್ಥೆ ಸಿದ್ಧಪಡಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೆ (Cricket South Africa) ಸಮಯ ಬೇಕಿರುವ ಕಾರಣ, ಸರಣಿಯನ್ನು ಒಂದು ವಾರ ಮುಂದೂಡಿದೆ. ಡಿಸೆಂಬರ್ 17ರ ಬದಲು ಡಿಸೆಂಬರ್ 26ರಿಂದ 3 ಪಂದ್ಯಗಳ ಟೆಸ್ಟ್‌ ಸರಣಿ (Test Series) ಆರಂಭವಾಗಲಿದೆ.

ಟೆಸ್ಟ್‌ ಸರಣಿ ಬಳಿಕ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆದರೆ 4 ಪಂದ್ಯಗಳ ಟಿ20 ಸರಣಿಯನ್ನು ಈ ಬಾರಿ ನಡೆಸದಿರಲು ನಿರ್ಧರಿಸಿದ್ದು, ಸರಣಿಯನ್ನು ಮುಂದಿನ ದಿನಗಳಲ್ಲಿ ಆಯೋಜನೆ ಮಾಡಲಾಗುವುದು ಎಂದು ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಜಂಟಿ ಹೇಳಿಕೆಯಲ್ಲಿ ಮಾಹಿತಿ ನೀಡಿವೆ.

ಎನ್‌ಸಿಎ ಮುಖ್ಯಸ್ಥರಾಗಿ ಲಕ್ಷ್ಮಣ್‌ ನೇಮಕ ಅಧಿಕೃತ

ಮುಂಬೈ: ರಾಷ್ಟ್ರೀಯ ಕ್ರಿಕೆಟ್‌ ಆಕಾಡೆಮಿ(ಎನ್‌ಸಿಎ) (National Cricket Academy ) ಮುಖ್ಯಸ್ಥರಾಗಿ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ (VVS Laxman) ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಶನಿವಾರ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಕಾಡೆಮಿಯ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್‌ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

BCCI Annual General Meeting: ದಕ್ಷಿಣ ಆಫ್ರಿಕಾ ಪ್ರವಾಸ ಬಗ್ಗೆ ಮಹತ್ವದ ಚರ್ಚೆ..!

ಡಿಸೆಂಬರ್ 13ರಂದು ಲಕ್ಷ್ಮಣ್‌ ಬೆಂಗಳೂರಿನ ಎನ್‌ಸಿಎ (NCA) ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಲಿದ್ದು, ಬಳಿಕ ಅಂಡರ್‌-19 ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಜೊತೆ ವೆಸ್ಟ್‌ ಇಂಡೀಸ್‌ಗೆ ಪ್ರಯಾಣಿಸಲಿದ್ದಾರೆ. ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ಮಾಜಿ ಕೋಚ್‌ ಟ್ರಾಯ್‌ ಕೂಲಿ ಎನ್‌ಸಿಎ ವೇಗದ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅಂಪೈರ್ಸ್‌, ಸಹಾಯಕ ಸಿಬ್ಬಂದಿ ವಯೋಮಿತಿ ಏರಿಕೆ

ಕೋಲ್ಕತ: ಭಾರತ ಕ್ರಿಕೆಟ್‌ ತಂಡದ ಸಹಾಯಕ ಸಿಬ್ಬಂದಿ, ಪಂದ್ಯದ ಅಧಿಕಾರಿಗಳ ವಯೋಮಿತಿಯನ್ನು ಬಿಸಿಸಿಐ 60ರಿಂದ 65ಕ್ಕೆ ವರ್ಷಕ್ಕೆ ಏರಿಕೆ ಮಾಡಿದೆ. ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಹಲವು ಅಂಪೈರ್‌, ಸ್ಕೋರರ್‌ ಹಾಗೂ ಮ್ಯಾಚ್‌ ರೆಫ್ರಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಕೋಚ್‌ಗಳು ಹೆಚ್ಚುವರಿ ಅವಧಿಗೆ ಸೇವೆ ಸಲ್ಲಿಸಲು ನೆರವಾಗಲಿದೆ.

ಹಿರಿಯ ಟೆಸ್ಟ್‌ ಆಟಗಾರ್ತಿ ಐಲೀನ್‌ ನಿಧನ

ಲಂಡನ್‌: ಅತ್ಯಂತ ಹಿರಿಯ ಟೆಸ್ಟ್‌ ಆಟಗಾರ್ತಿ ಐಲೀನ್‌ ಆ್ಯಶ್‌ 110ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ವಿಚಾರವನ್ನು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಶನಿವಾರ ಖಚಿತಪಡಿಸಿದೆ. 1937ರಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಐಲೀನ್‌ ಅವರು ಏಳು ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 10 ವಿಕೆಟ್‌ ಪಡೆದಿದ್ದಾರೆ. ಅವರು 1949ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, 2017ರಲ್ಲಿ ಭಾರತ-ಇಂಗ್ಲೆಂಡ್‌ ನಡುವಿನ ಮಹಿಳಾ ಏಕದಿನ ವಿಶ್ವಕಪ್‌ ಪೈನಲ್‌ ಪಂದ್ಯಕ್ಕೂ ಮುನ್ನ ಬೆಲ್‌ ಬಾರಿಸಿದ್ದರು.

Follow Us:
Download App:
  • android
  • ios