ಪೋಚೆಫ್‌ಸ್ಟ್ರೋಮ್‌(ಫೆ.07): ಐಸಿಸಿ ಅಂಡರ್‌-19 ಕ್ರಿಕೆಟ್‌ ವಿಶ್ವಕಪ್‌ನ ಫೈನಲ್‌ಗೆ ಬಾಂಗ್ಲಾದೇಶ ತಂಡ ಪ್ರವೇಶಿಸಿದೆ. ಇದೇ ಮೊದಲ ಬಾರಿಗೆ ತಂಡ ಈ ಸಾಧನೆ ಮಾಡಿದೆ. ಗುರುವಾರ ಇಲ್ಲಿ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ 4 ಬಾರಿಯ ಚಾಂಪಿಯನ್‌ ಭಾರತ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

ನ್ಯೂಜಿಲೆಂಡ್‌ ನೀಡಿದ 212 ರನ್‌ಗಳ ಸುಲಭ ಗುರಿಯನ್ನು ಬಾಂಗ್ಲಾದೇಶ ಕೇವಲ 44.1 ಓವರಲ್ಲಿ ಬೆನ್ನತ್ತಿತು. ಮೊಹಮದುಲ್‌ ಹಸನ್‌ ಜಾಯ್‌ 127 ಎಸೆತಗಳಲ್ಲಿ 100 ರನ್‌ ಬಾರಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭಿಕರು ಬೇಗನೆ ಔಟಾದ ಬಳಿಕ, ಮಹಮದುಲ್‌ ಮೊದಲು ತೌಹಿದ್‌ ಹೃದೊಯ್‌ (40) ಜತೆ ಸೇರಿ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಶಹದತ್‌ ಹುಸೇನ್‌ (ಅಜೇಯ 40) ಜತೆ 4ನೇ ವಿಕೆಟ್‌ಗೆ 101 ರನ್‌ ಜೊತೆಯಾಟವಾಡಿ ತಂಡಕ್ಕೆ ಜಯ ತಂದುಕೊಟ್ಟರು.

ಪಾಕ್‌ಗೆ ಮಿಸುಕಾಡಲು ಬಿಡದ ಹುಡುಗರು, ಅಂಡರ್-19 ಫೈನಲ್‌ಗೆ ಭಾರತ

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 74 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ದರೆ ಬೆಕ್‌ಹ್ಯಾಮ್‌ ವೀಲ್ಹರ್‌ ಅವರ 75 ರನ್‌ಗಳ ಆಕರ್ಷಕ ಇನ್ನಿಂಗ್ಸ್‌ನ ನೆರವಿನಿಂದ 8 ವಿಕೆಟ್‌ ನಷ್ಟಕ್ಕೆ 211 ರನ್‌ ಕಲೆಹಾಕಿತು.

ನಾಡಿದ್ದು ಫೈನಲ್‌ ಪಂದ್ಯ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಫೈನಲ್‌ ಪಂದ್ಯ ಫೆ.9ರಂದು ಭಾನುವಾರ ಪೋಚೆಫ್‌ಸ್ಟ್ರೋಮ್‌ನಲ್ಲಿ ನಡೆಯಲಿದೆ. ಭಾರತ ತಂಡದಂತೆಯೇ ಬಾಂಗ್ಲಾದೇಶ ಸಹ ಟೂರ್ನಿಯಲ್ಲಿ ಅಜೇಯವಾಗಿ ಉಳಿದುಕೊಂಡಿದೆ. ಭಾರತ 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಬಾಂಗ್ಲಾದೇಶ ಚೊಚ್ಚಲ ಬಾರಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದು, ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಮೊದಲ ಸೆಮಿಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಫೈನಲ್‌ ಪ್ರವೇಶಿಸಿತ್ತು.

ಸ್ಕೋರ್‌: 
ನ್ಯೂಜಿಲೆಂಡ್‌ 50 ಓವರಲ್ಲಿ 211/8 (ಬೆಕ್‌ಹ್ಯಾಮ್‌ 75, ಶೋರಿಫುಲ್‌ 3-45), 
ಬಾಂಗ್ಲಾದೇಶ 44.1 ಓವರಲ್ಲಿ 215/4 (ಮಹಮದುಲ್‌ 100, ಶಹದತ್‌ 40*)