* ಬಾಂಗ್ಲಾದೇಶ ವೇಗಿ ಶೊಹಿದುಲ್‌ ಇಸ್ಲಾಂ ಕ್ರಿಕೆಟ್‌ನಿಂದ 10 ತಿಂಗಳು ಬ್ಯಾನ್* ಡೋಪಿಂಗ್‌ ನಿಯಮ ಉಲ್ಲಂಘನೆಯ ಕಾರಣಕ್ಕೆ ಶೊಹಿದುಲ್‌ ಇಸ್ಲಾಂಗೆ ನಿಷೇಧ* ಶೊಹಿದುಲ್‌ 2023ರ ಮಾರ್ಚ್‌ 28ರ ಬಳಿಕ ಕ್ರಿಕೆಟ್‌ ಆಡಲು ಅರ್ಹತೆ

ದುಬೈ(ಜು.15): ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲವಾದ ಬಾಂಗ್ಲಾದೇಶ ತಂಡದ ವೇಗಿ ಶೊಹಿದುಲ್‌ ಇಸ್ಲಾಂಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) 10 ತಿಂಗಳು ನಿಷೇಧ ಹೇರಿದೆ. ಈ ಬಗ್ಗೆ ಐಸಿಸಿ ಪ್ರಕಟಣೆ ಹೊರಡಿಸಿದ್ದು, ಡೋಪಿಂಗ್‌ ನಿಯಮ ಉಲ್ಲಂಘನೆಯ ಕಾರಣಕ್ಕೆ ಶೊಹಿದುಲ್‌ ಇಸ್ಲಾಂಗೆ ನಿಷೇಧ ವಿಧಿಸಲಾಗಿದ್ದು, ಇನ್ನು 10 ತಿಂಗಳು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ ಎಂದಿದೆ. 27 ವರ್ಷದ ಶೊಹಿದುಲ್‌ 2023ರ ಮಾರ್ಚ್‌ 28ರ ಬಳಿಕ ಕ್ರಿಕೆಟ್‌ ಆಡಲು ಅರ್ಹತೆ ಪಡೆಯಲಿದ್ದಾರೆ.

ಶೊಹಿದುಲ್‌ ಇಸ್ಲಾಂ ಬಾಂಗ್ಲಾದೇಶ ಎದುರು ಏಕೈಕ ಟಿ20 ಪಂದ್ಯವನ್ನಾಡಿದ್ದರು. ಪಾಕಿಸ್ತಾನ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಶೊಹಿದುಲ್ ಇಸ್ಲಾಂ, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್ ಕಬಳಿಸಿದ್ದರು. ಶೊಹಿದುಲ್ ಇಸ್ಲಾಂ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಬಾಂಗ್ಲಾದೇಶ ತಂಡದೊಂದಿಗೆ ಪ್ರವಾಸ ಮಾಡಿದ್ದರಾದರೂ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

2ನೇ ಏಕದಿನ: ವಿಂಡೀಸ್‌ ವಿರುದ್ಧ ಬಾಂಗ್ಲಾಕ್ಕೆ ಜಯ

ಜಾಜ್‌ರ್‍ಟೌನ್‌: ವೆಸ್ಟ್‌ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 9 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಟೆಸ್ಟ್‌ ಹಾಗೂ ಟಿ20 ಸರಣಿ ಸೋತರೂ ಏಕದಿನ ಸರಣಿ ಗೆಲ್ಲಲು ಬಾಂಗ್ಲಾ ಯಶಸ್ವಿಯಾಗಿದೆ. 

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 35 ಓವರ್‌ಗಳಲ್ಲಿ ಕೇವಲ 108 ರನ್‌ಗೆ ಆಲೌಟಾಯಿತು. ಕೀಮೊ ಪೌಲ್‌(25) ತಂಡದ ಪರ ಗರಿಷ್ಠ ಮೊತ್ತ ದಾಖಲಿಸಿದರೆ, ಶಾಯ್‌ ಹೋಪ್‌ 18, ಮೇಯ​ರ್ಸ್‌ 17 ರನ್‌ ಕೊಡುಗೆ ನೀಡಿದರು. ಮೆಹದಿ ಹಸನ್‌ 4, ನಸುಮ್‌ ಅಹ್ಮದ್‌ 3 ವಿಕೆಟ್‌ ಪಡೆದರು. ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ 20.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಜಯಿಸಿತು. ತಮೀಮ್‌ ಇಕ್ಬಾಲ್‌(50) ಅರ್ಧಶತಕ ಬಾರಿಸಿದರು. ಕೊನೆ ಪಂದ್ಯ ಶನಿವಾರ ನಡೆಯಲಿದೆ.

ಆಸೀಸ್‌ ಏಕದಿನ ಸರಣಿ: ದಕ್ಷಿಣ ಆಫ್ರಿಕಾ ಹಿಂದಕ್ಕೆ

ಬ್ರಿಸ್ಬೇನ್‌: ಮುಂದಿನ ವರ್ಷ ಜನವರಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಆಡಬೇಕಿದ್ದ ಏಕದಿನ ಸರಣಿಯಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದೆ. ಜೊತೆಗೆ 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ನೆರವಾಗುವ ಐಸಿಸಿ ಸೂಪರ್‌ ಲೀಗ್‌ ಅಂಕಗಳನ್ನು ಆಸೀಸ್‌ಗೆ ಬಿಟ್ಟುಕೊಡಲು ದಕ್ಷಿಣ ಆಫ್ರಿಕಾ ಒಪ್ಪಿಕೊಂಡಿದೆ. ಬಿಡುವಿಲ್ಲದ ವೇಳಾಪಟ್ಟಿ ಮತ್ತು 2023ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಹೊಸ ಟಿ20 ಲೀಗ್‌ ಆರಂಭಿಸಲಿರುವ ಹಿನ್ನೆಲೆಯಲ್ಲಿ ಏಕದಿನ ಸರಣಿಯಲ್ಲಿ ಆಡದಿರಲು ನಿರ್ಧರಿಸಲಾಗಿದೆ. ಟಿ20 ಲೀಗ್‌ಗೆ ತನ್ನೆಲ್ಲಾ ತಾರಾ ಆಟಗಾರರು ಲಭ್ಯವಿರಬೇಕು ಎನ್ನುವುದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ಉದ್ದೇಶವಾಗಿದೆ.

Ind vs Eng ಟಾಪ್ಲಿ ಟಾಪ್ ಸ್ಪೀಡ್‌ಗೆ ತತ್ತರಿಸಿದ ಟೀಂ ಇಂಡಿಯಾ..!

ಸಿಕ್ಸರ್‌ನಿಂದ ಗಾಯಗೊಂಡ ಬಾಲಕಿಯ ಸಂತೈಸಿದ ರೋಹಿತ್‌

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದ ವೇಳೆ ತಾವು ಬಾರಿಸಿದ ಸಿಕ್ಸರ್‌ ಬಡಿದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಲಕಿಯನ್ನು ರೋಹಿತ್‌ ಶರ್ಮಾ ಪಂದ್ಯದ ಬಳಿಕ ಭೇಟಿಯಾಗಿದ್ದು, ಫೋಟೋಗಳು ವೈರಲ್‌ ಆಗಿವೆ. ಪಂದ್ಯದ 5ನೇ ಓವರ್‌ ವೇಳೆ ರೋಹಿತ್‌ ಬಾರಿಸಿದ್ದ ಬಾಲ್‌ 6 ವರ್ಷದ ಮೀರಾ ಸಾಲ್ವಿ ಎಂಬ ಬಾಲಕಿಗೆ ಬಡಿದಿತ್ತು. ಕೂಡಲೇ ಇಂಗ್ಲೆಂಡ್‌ ತಂಡದ ಫಿಸಿಯೋಗಳು ಬಾಲಕಿಯ ಬಳಿ ತೆರಳಿ ಉಪಚರಿಸಿದ್ದರು. ಪಂದ್ಯ ಕೊನೆಗೊಂಡ ಬಳಿಕ ರೋಹಿತ್‌ ಬಾಲಕಿಯ ಬಳಿ ತೆರಳಿ ಸಂತೈಸಿದ್ದಾರೆ. ಇಂಗ್ಲೆಂಡ್‌ ತಂಡ ಜೆರ್ಸಿಯನ್ನೂ ಉಡುಗೊರೆಯಾಗಿ ನೀಡಿದೆ. ಇದರ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.