* ಇಂಗ್ಲೆಂಡ್ ಎದುರು ಭಾರತಕ್ಕೆ ಆಘಾತಕರಾರಿ ಸೋಲು* ಎರಡನೇ ಏಕದಿನ ಪಂದ್ಯದಲ್ಲಿ 100 ರನ್‌ಗಳ ಅಂತರದ ಸೋಲುಂಡ ಟೀಂ ಇಂಡಿಯಾ* ರೀಸ್ ಟಾಪ್ಲಿ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ
ಲಂಡನ್(ಜು.15): ಆರಂಭಿಕ ಪಂದ್ಯದಲ್ಲಿ ಮಾರಕ ವೇಗದ ಬೌಲಿಂಗ್ ಹಾಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಈ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿತು. ರೀಸ್ ಟಾಪ್ಲಿ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ 100 ರನ್ ಸೋಲನುಭವಿಸಿತು. ಇದರೊಂದಿಗೆ ಅತಿಥೇಯ ಇಂಗ್ಲೆಂಡ್ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು. ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49 ಓವರಲ್ಲಿ 246ಕ್ಕೆ ಆಲೌಟಾಯಿತು. ಸಾಧಾರಣ ಗುರಿ ಬೆನ್ನತ್ತಿದರೂ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ 38.5 ಓವರಲ್ಲಿ 146ಕ್ಕೆ ಆಲೌಟಾಯಿತು.
ಮೊದಲ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೇ ಪಂದ್ಯ ಗೆದ್ದಿದ್ದ ಭಾರತ ಈ ಪಂದ್ಯದಲ್ಲಿ ಆರಂಭದಲ್ಲೇ ಆಘಾತ ಅನುಭವಿಸಿತು. ರೋಹಿತ್ ಶೂನ್ಯಕ್ಕೆ ನಿರ್ಗಮಿಸಿದರೆ, ಶಿಖರ್ ಧವನ್ 9 ರನ್‌ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ ಇನ್ನಿಂಗ್ಸ್ 16ಕ್ಕೆ ಕೊನೆಗೊಂಡಿತು. ರಿಷಭ್ ಪಂತ್ ರನ್ ಖಾತೆ ತೆರಯದೆ ನಿರ್ಗಮಿಸಿದರು. 31ಕ್ಕೆ 4 ವಿಕೆಟ್ ಕಳೆದುಕೊಂಡ ತಂಡ ಮತ್ತೆ ದೊಡ್ಡ ಪ್ರತಿರೋಧವೇನೂ ತೋರಲಿಲ್ಲ. ಸೂರ್ಯಕುಮಾರ್ ಯಾದವ್(27), ಹಾರ್ದಿಕ್ ಪಾಂಡ್ಯ(29), ರವೀಂದ್ರ ಜಡೇಜಾ(29), ಮೊಹಮದ್ ಶಮಿ(23) ಅಲ್ಪ ಹೋರಾಟ ಪ್ರದರ್ಶಿಸಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ. ವೇಗಿ ಟಾಪ್ಲೆ 2 ಮೇಡನ್ ಓವರ್ ಸಹಿತ 9.5 ಓವರಲ್ಲಿ 24ಕ್ಕೆ 6 ವಿಕೆಟ್ ಕಬಳಿಸಿದರು.
ಪುಟಿದೆದ್ದ ಇಂಗ್ಲೆಂಡ್
ಇಂಗ್ಲೆಂಡ್ ಮೊದಲ ಪಂದ್ಯದಂತೆಯೇ ಈ ಬಾರಿಯೂ ಆರಂಭಿಕ ಕುಸಿತ ಕಂಡಿತು. ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರೂ ಮೊದಲ 5 ವಿಕೆಟ್ ಬೇಗನೇ ಉರುಳಿತು. ಬೇರ್‌ಸ್ಟೋವ್ 38, ರಾಯ್ 23, ಸ್ಟೋಕ್ಸ್ 21 ರನ್ ಗಳಿಸಿದರು. 102ಕ್ಕೆ 5 ವಿಕೆಟ್ ಕಳೆದುಕೊಂಡ ತಂಡ ಬೇಗನೇ ಕುಸಿಯುವ ಸ್ಥಿತಿಯಲ್ಲಿತ್ತು. ಆದರೆ ಮೊಯೀನ್ ಅಲಿ(47), ಲಿವಿಂಗ್‌ಸ್ಟೋನ್( 33) ವಿಲ್ಲಿ (41) ಹೋರಾಡಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಚಹಲ್ 10 ಓವರಲ್ಲಿ 47 ರನ್ ನೀಡಿ 4 ವಿಕೆಟ್ ಪಡೆದರು.
ಅಂಕಿ-ಅಂಶ
06 ವಿಕೆಟ್: ಟಾಪ್ಲಿ 24ಕ್ಕೆ 6 ವಿಕೆಟ್ ಪಡೆದಿದ್ದು ಇಂಗ್ಲೆಂಡ್ ಬೌಲರ್‌ನ ಶ್ರೇಷ್ಠ ಪ್ರದರ್ಶನ. ಈ ಮೊದಲು ಕಾಲಿಂಗ್‌ವುಡ್ 31ಕ್ಕೆ 6 ವಿಕೆಟ್ ಪಡೆದಿದ್ದರು.
02 ಬೌಲರ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ 6 ವಿಕೆಟ್ ಕಿತ್ತ 2ನೇ ಬೌಲರ್ ಟಾಪ್ಲಿ. ಈ ಮೊದಲು ಶಾಹೀನ್ ಅಫ್ರಿದಿ ಈ ಸಾಧನೆ ಮಾಡಿದ್ದರು.
