ರಾಹುಲ್, ಶ್ರೇಯಸ್ ಅರ್ಧಶತಕ; ಬಾಂಗ್ಲಾಗೆ ಸ್ಪರ್ಧಾತ್ಮಕ ಗುರಿ!
ಬಾಂಗ್ಲಾದೇಶ ವಿರುದ್ದದ 3ನೇ ಟಿ20 ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದರೂ ದಿಟ್ಟ ಹೋರಾಟ ನೀಡಿದೆ. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹೋರಾಟದಿಂದ ಸ್ಪರ್ಧಾತ್ಮಕ್ ಮೊತ್ತ ಪೇರಿಸಿದೆ.
ನಾಗ್ಪುರ(ನ.10): ಬಾಂಗ್ಲಾದೇಶ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯ ಸರಣಿ ಗೆಲುವಿಗೆ ನಿರ್ಣಾಯಕ ಪಂದ್ಯ. 1-1 ಅಂತರದಲ್ಲಿ ಸರಣಿ ಸಮಬಲಗೊಂಡಿರುವ ಕಾರಣ, ಈ ಪಂದ್ಯ ಗೆದ್ದ ತಂಡ ಸರಣಿ ಕೈವಶ ಮಾಡಲಿದೆ. ಮಹತ್ವದ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದೆ. ಈ ಮೂಲಕ ಬಾಂಗ್ಲಾಗೆ 175 ರನ್ ಟಾರ್ಗೆಟ್ ನೀಡಿದೆ.
ಇದನ್ನೂ ಓದಿ: ನಿರ್ಣಾಯಕ ಟಿ20: ತಂಡದ ಆಯ್ಕೆ ವಿರುದ್ದ ಫ್ಯಾನ್ಸ್ ಗರಂ!
ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಕೇವಲ 2 ರನ್ ಸಿಡಿಸಿ ಔಟಾದರು. ಶಿಖರ್ ಧವನ್ 19 ರನ್ ಕಾಣಿಕೆ ನೀಡಿ ಪೆವಿಲಿಯನ್ ಸೇರಿಕೊಂಡರು. 35 ರನ್‌ಗೆ ಭಾರತದ 2 ವಿಕೆಟ್ ಪತನಗೊಂಡಿತ್ತು. ಆದರೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತು.
ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು. ರಾಹುಲ್ 35 ಎಸೆತದಲ್ಲಿ 7 ಬೌಂಡರಿ ನೆರವಿನಿಂದ 52 ರನ್ ಸಿಡಿಸಿ ಔಟಾದರು. ಇತ್ತ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ದಾಖಲಿಸಿದರು. ಅಯ್ಯರ್ ಹೋರಾಟ ಮುಂದುವರಿಸಿದರೆ, ಕಳಪೆ ಫಾರ್ಮ್ ನಡುವೆಯೂ ಅವಕಾಶ ಪಡೆಯುತ್ತಿರುವ ರಿಷಬ್ ಪಂತ್ ಮತ್ತೆ ನಿರಾಸೆ ಮೂಡಿಸಿದರು. ಪಂತ್ ಕೇವಲ 6 ರನ್ ಸಿಡಿಸಿ ಔಟಾದರು.
ಶ್ರೇಯಸ್ ಅಯ್ಯರ್ 62 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡೆ ಅಜೇಯ 22ರನ್ ಹಾಗೂ ಶಿವಂ ದುಬೆ ಅಜೇಯ 9 ರನ್ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿತು.