ಐಪಿಎಲ್‌ನಿಂದ ಮುಸ್ತಾಫಿಜುರ್ ಅವರನ್ನು ಕೈಬಿಟ್ಟಿದ್ದಕ್ಕೆ ಪ್ರತೀಕಾರವಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಂಬರುವ 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದಲ್ಲಿ ನಡೆಯಲಿರುವ ತನ್ನ ಪಂದ್ಯಗಳನ್ನು ಬಹಿಷ್ಕರಿಸಿ, ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಬಿಸಿಬಿ ಚಿಂತನೆ ನಡೆಸಿದೆ.

ಢಾಕಾ: ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಐಪಿಎಲ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ಇತ್ತೀಚೆಗೆ ಅಧಿಕೃತವಾಗಿ ಘೋಷಿಸಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾದ ಕಾರಣ, ಆಟಗಾರನನ್ನು ತಂಡದಿಂದ ಕೈಬಿಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೋಲ್ಕತಾ ನೈಟ್ ರೈಡರ್ಸ್‌ಗೆ ಸೂಚನೆ ನೀಡಿತ್ತು. ಈ ಬೆಳವಣಿಗೆಯ ನಂತರ ಮುಸ್ತಾಫಿಜುರ್, 'ಅವರು ನನ್ನನ್ನು ಕೈಬಿಟ್ಟರೆ ನಾನೇನು ಮಾಡಲು ಸಾಧ್ಯ?' ಎಂದು ಬಾಂಗ್ಲಾದೇಶದ ಕ್ರೀಡಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಬಿಸಿಸಿಐ

ಈಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಪ್ರತೀಕಾರದ ಕ್ರಮಕ್ಕೆ ಮುಂದಾಗಿದೆ. ಮುಂದಿನ ತಿಂಗಳು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡವು ಭಾರತದಲ್ಲಿ ಆಡುವುದಿಲ್ಲ ಎಂಬ ವರದಿಗಳು ಹೊರಬರುತ್ತಿವೆ. ಇದರ ಜೊತೆಗೆ, ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡದಿರಲು ಸಹ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮುಸ್ತಾಫಿಜುರ್ ಅವರನ್ನು ಕೈಬಿಟ್ಟಿದ್ದಕ್ಕೆ ಪ್ರತಿಭಟನೆಯಾಗಿ, 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದಲ್ಲಿ ನಡೆಯಬೇಕಿರುವ ತಮ್ಮ ಪಂದ್ಯಗಳನ್ನು ಬಹಿಷ್ಕರಿಸಲು ಬಾಂಗ್ಲಾದೇಶ ಸಿದ್ಧತೆ ನಡೆಸಿದೆ.

ಭದ್ರತಾ ಕಾರಣಗಳನ್ನು ಮುಂದಿಟ್ಟು, ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಕೋರಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಐಸಿಸಿಯನ್ನು ಸಂಪರ್ಕಿಸಲು ಸಿದ್ಧತೆ ನಡೆಸಿದೆ. ಟಿ20 ವಿಶ್ವಕಪ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಬಾಂಗ್ಲಾದೇಶದ ಎಲ್ಲಾ ಪಂದ್ಯಗಳು ಭಾರತದಲ್ಲಿ ನಿಗದಿಯಾಗಿವೆ. ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಮೊದಲ ಪಂದ್ಯ ಫೆಬ್ರವರಿ 7 ರಂದು ನಡೆಯಲಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವೇಳಾಪಟ್ಟಿ

ಫೆಬ್ರವರಿ 07ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ನಂತರ, ಬಾಂಗ್ಲಾದೇಶ ಫೆಬ್ರವರಿ 9 ರಂದು ಇಟಲಿ ಮತ್ತು ಫೆಬ್ರವರಿ 14 ರಂದು ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಫೆಬ್ರವರಿ 17 ರಂದು ನೇಪಾಳ ವಿರುದ್ಧದ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ದೇಶನದ ಮೇರೆಗೆ ಬಾಂಗ್ಲಾದೇಶ ತಂಡವು ಒಂದು ವೇಳೆ ಭಾರತಕ್ಕೆ ಬರಲು ನಿರಾಕರಿಸಿದರೆ, ಈ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕಾಗಬಹುದು ಎನ್ನಲಾಗುತ್ತಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಹೀಗಿದೆ:

ಲಿಟನ್ ಕುಮಾರ್ ದಾಸ್(ನಾಯಕ), ಮೊಹಮ್ಮದ್ ಸೈಫ್ ಹಸನ್(ಉಪನಾಯಕ), ತಂಜೀದ್ ಹಸನ್. ಮೊಹಮ್ಮದ್ ಪರ್ವೇಜ್‌ ಹೊಸೈನ್, ತೌಹಿದ್ ಹೃದಯ್, ಶಮಿಮ್‌ ಹೊಸೈನ್, ಝ್ವಜಿ ನೂರುಲ್ ಹಸನ್ ಸೋಹನ್, ಶಾಕ್ ಮೆಹದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹಮದ್, ಮುಸ್ತಾಫಿಜುರ್ ರಹಮಾನ್, ತಂಜಿಮ್ ಹಸನ್ ಶಕಿಬ್, ಟಸ್ಕಿನ್ ಅಹಮದ್, ಮೊಹಮ್ಮದ್ ಸೈಫುದ್ದೀನ್, ಶೌರಿಫುಲ್ ಇಸ್ಲಾಂ.

ಗೊಂದಲದ ಗೂಡಾದ ಭಾರತದ ಬಾಂಗ್ಲಾದೇಶ ಪ್ರವಾಸ:

ಕಳೆದ ವರ್ಷವೇ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸ ಮಾಡಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಈ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು. ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ವೇಳಾಪಟ್ಟಿಯಲ್ಲಿ ಮುಂಬರುವ ಸೆಪ್ಟೆಂಬರ್‌ನಲ್ಲಿ ಭಾರತ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ಬಾಂಗ್ಲಾದೇಶ ಪ್ರವಾಸ ಮಾಡಲಿದೆ ಎಂದು ತಿಳಿಸಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಪಂದ್ಯ ನಡೆಯುವುದು ಅನುಮಾನ ಎನಿಸಿದೆ.