ಢಾಕಾ(ಮಾ.06): ಕ್ರಿಕೆಟ್‌ ಪಂದ್ಯದ ನಡುವೆಯೇ ಆಟಗಾರನೊಬ್ಬನಿಗೆ ಕೊರೋನಾ ಸೋಂಕು ದೃಢಪಟ್ಟು, ಮೈದಾನದಲ್ಲಿದ್ದ ಅಷ್ಟೂ ಆಟಗಾರರನ್ನು ಐಸೋಲೇಷನ್‌ಗೆ ಸ್ಥಳಾಂತರಿಸಿದ ವಿಚಿತ್ರ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. 

ಬಾಂಗ್ಲಾ ಹಾಗೂ ಐರ್ಲೆಂಡ್‌ ಉದಯೋನ್ಮುಖ ಆಟಗಾರರ ತಂಡಗಳ ನಡುವೆ ಪಂದ್ಯಕ್ಕೂ ಮುನ್ನ ಆಟಗಾರರ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ವರದಿ ಬರುವುದು ತಡವಾಗಿದ್ದರಿಂದ ಪಂದ್ಯ ಆರಂಭಿಸಲಾಗಿತ್ತು. ಆದರೆ ಆಟದ ಮಧ್ಯೆ ಐರ್ಲೆಂಡ್‌ನ ಆಲ್ರೌಂಡರ್‌ ರುಹಾನ್‌ ಪ್ರೆಟೋರಿಯಸ್‌ಗೆ ಸೋಂಕು ತಗುಲಿದೆ ಎನ್ನುವುದು ವರದಿ ಮೂಲಕ ತಿಳಿಯಿತು. ಅಷ್ಟೊತ್ತಿಗಾಗಲೇ ರುಹಾನ್‌ 4 ಓವರ್‌ ಬೌಲ್‌ ಮಾಡಿ 1 ವಿಕೆಟ್‌ ಸಹ ಪಡೆದಿದ್ದರು. ಬಳಿಕ ಆಟಗಾರರನ್ನು ಐಸೋಲೇಷನ್‌ಗೆ ಸ್ಥಳಾಂತರಿಸಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು.

ಟಾಸ್ ಗೆದ್ದ ಐರ್ಲೆಂಡ್‌ ಎ ತಂಡವು ಬಾಂಗ್ಲಾದೇಶಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಬಾಂಗ್ಲಾ ಉದಯೋನ್ಮುಖ ಆಟಗಾರರ ತಂಡ 30 ಓವರ್‌ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 122 ರನ್‌ ಬಾರಿಸಿತ್ತು. ಡ್ರಿಂಕ್ಸ್‌ ಬ್ರೇಕ್ ವೇಳೆಗೆ ಕೋವಿಡ್‌ ಟೆಸ್ಟ್ ರಿಪೋರ್ಟ್ ಸಂಬಂಧಪಟ್ಟ ಅಧಿಕಾರಿಗಳ ಕೈ ಸೇರಿದೆ. ತಕ್ಷಣವೇ ಎಚ್ಚೆತ್ತುಕೊಂಡ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ದಿಢೀರ್ ಪಂದ್ಯ ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿತು.

7 ಮಂದಿಗೆ ಕೊರೋನಾ: ಪಾಕಿಸ್ತಾನ ಸೂಪರ್ ಲೀಗ್ ದಿಢೀರ್ ಸ್ಥಗಿತ..!

ಪಾಕಿಸ್ತಾನ ಸೂಪರ್ ಲೀಗ್‌ ಟೂರ್ನಿಯಲ್ಲಿ 7 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಟಿ20 ಟೂರ್ನಿಯನ್ನೇ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದಾಗಿ ದಿನಕಳೆಯುವಷ್ಟರಲ್ಲೇ ಮತ್ತೊಂದು ಕ್ರಿಕೆಟ್ ಸರಣಿ ರದ್ದಾಗಿದೆ.