Asianet Suvarna News Asianet Suvarna News

Ban vs NZ: ಹೊಸ ವರ್ಷದ ಮೊದಲ ದಿನವೇ ಶತಕ ಚಚ್ಚಿದ ಡೆವೊನ್‌ ಕಾನ್‌ವೇ

* ಹೊಸ ವರ್ಷದ ಮೊದಲ ದಿನವೇ ಶತಕ ಚಚ್ಚಿದ ಡೆವೊನ್ ಕಾನ್‌ವೇ

* ಬಾಂಗ್ಲಾದೇಶ ವಿರುದ್ದ ಮೊದಲ ಟೆಸ್ಟ್‌ನಲ್ಲಿ ಕಾನ್‌ವೇ ಆಕರ್ಷಕ ಶತಕ

* ಮೊದಲ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ 258/5

 

Ban vs NZ Devon Conway Century Anchors New Zealand against Bangladesh in 1st Test kvn
Author
Bengaluru, First Published Jan 1, 2022, 5:51 PM IST

ಮೌಂಟ್‌ ಮ್ಯಾಂಗ್ಯುಯಿನಿ(ಜ.01): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಬ್ಯಾಟರ್‌ ಡೆವೊನ್‌ ಕಾನ್‌ವೇ (Devon Conway) (122), ಬಾಂಗ್ಲಾದೇಶ ವಿರುದ್ದ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನವೇ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 2022ರ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನವೇ ಡೆವೊನ್‌ ಕಾನ್‌ವೇ ಆಕರ್ಷಕ ಶತಕ ಸಿಡಿಸಿ, ಹೊಸ ವರ್ಷವನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಮೊದಲ ದಿನದಾಟದಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು (New Zealand Cricket Team) 5 ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದೆ.

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಲ್ಲೇ ನಾಯಕ ಟಾಮ್ ಲೇಥಮ್‌ (Tom Latham) ಕೇವಲ ಒಂದು ರನ್ ಬಾರಿಸಿ ಶೌರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಲಿಟನ್‌ ದಾಸ್‌ಗೆ (Liton Das) ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಆತಿಥೇಯ ಕಿವೀಸ್‌ ತಂಡಕ್ಕೆ ವಿಲ್‌ ಯಂಗ್‌ ಹಾಗೂ ಡೆವೊನ್‌ ಕಾನ್‌ವೇ ಆಸರೆಯಾದರು.

ಶತಕದ ಜತೆಯಾಟ ನಿಭಾಯಿಸಿದ ಕಾನ್‌ವೇ-ಯಂಗ್ ಜೋಡಿ: ಕೇವಲ ಒಂದು ರನ್‌ಗೆ ಒಂದು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಎರಡನೇ ವಿಕೆಟ್‌ಗೆ ವಿಲ್‌ ಯಂಗ್ ಹಾಗೂ ಡೆವೊನ್‌ ಕಾನ್‌ವೇ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 138 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು. ಆರಂಭಿಕ ಬ್ಯಾಟರ್‌ ವಿಲ್ ಯಂಗ್ 52 ರನ್‌ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು.

2011ರ ವಿಶ್ವಕಪ್ ಬಳಿಕ ನನಗೆ ಸೂಕ್ತ ಅವಕಾಶ ಕೊಡಲಿಲ್ಲ: ಹರ್ಭಜನ್ ಸಿಂಗ್ ಬೇಸರ..!

ಆಕರ್ಷಕ ಟೆಸ್ಟ್ ಶತಕ ಬಾರಿಸಿದ ಕಾನ್‌ವೇ: ವೃತ್ತಿಜೀವನದ ನಾಲ್ಕನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಡೆವೊನ್‌ ಕಾನ್‌ವೇ ಇದೀಗ ಮತ್ತೊಂದು ಸೊಗಸಾದ ಇನಿಂಗ್ಸ್ ಆಡುವ ಮೂಲಕ ವೃತ್ತಿಜೀವನದ ಎರಡನೇ ಟೆಸ್ಟ್ ಶತಕ ಬಾರಿಸಿ ಮಿಂಚಿದ್ದಾರೆ. ಎಡಗೈ ಬ್ಯಾಟರ್‌ ಕಾನ್‌ವೇ ಒಟ್ಟು 227 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 122 ರನ್‌ ಬಾರಿಸಿ ಮೊಮಿನುಲ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಡೆವೊನ್‌ ಕಾನ್‌ವೇ ಶತಕ ಬಾರಿಸುತ್ತಿದ್ದಂತೆಯೇ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.

ಇನ್ನು ತವರಿನಲ್ಲಿ ವೃತ್ತಿಜೀವನದ ಕಡೆಯ ಟೆಸ್ಟ್ ಸರಣಿಯನ್ನಾಡುತ್ತಿರುವ ಅನುಭವಿ ಬ್ಯಾಟರ್‌ ರಾಸ್ ಟೇಲರ್ (Ross Taylor) ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ರಾಸ್ ಟೇಲರ್ 64 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್‌ ಬ್ಯಾಟರ್‌ ಟಾಮ್‌ ಬ್ಲಂಡೆಲ್‌ 11 ರನ್‌ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೆನ್ರಿ ನಿಕೋಲ್ಸ್‌ 32 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬಾಂಗ್ಲಾದೇಶ ಪರ ಶೌರಿಫುಲ್ ಇಸ್ಲಾಂ 2 ವಿಕೆಟ್ ಪಡೆದರೆ, ಎಬೊದತ್ ಹೊಸೈನ್‌ ಹಾಗೂ ನಾಯಕ ಮೊಮಿನುಲ್ ಹಕ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್: 258/5
ಡೆವೊನ್‌ ಕಾನ್‌ವೇ: 122
ಶೌರಿಫುಲ್ ಇಸ್ಲಾಂ: 53/2
(* ಮೊದಲ ದಿನದಾಟದಂತ್ಯದ ವೇಳೆಗೆ)
 

Follow Us:
Download App:
  • android
  • ios